ADVERTISEMENT

ಗ್ರಾಮೀಣ ಪ್ರತಿಭೆ ‘ಕರ್ನಾಟಕ ಕ್ರೀಡಾ ರತ್ನ’

ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಸಿದ್ದಪ್ಪ ಸಾಧನೆ

ಬಾಲಶೇಖರ ಬಂದಿ
Published 9 ಏಪ್ರಿಲ್ 2022, 19:30 IST
Last Updated 9 ಏಪ್ರಿಲ್ 2022, 19:30 IST
ಸ್ಪರ್ಧೆಯೊಂದರಲ್ಲಿ ಸಂಗ್ರಾಣಿ ಕಲ್ಲನ್ನು ಎತ್ತಿ ಹಿಡಿದಿರುವ ಹೊಸಟ್ಟಿಯ ಸಿದ್ದಪ್ಪ ಹೊಸಮನಿ 
ಸ್ಪರ್ಧೆಯೊಂದರಲ್ಲಿ ಸಂಗ್ರಾಣಿ ಕಲ್ಲನ್ನು ಎತ್ತಿ ಹಿಡಿದಿರುವ ಹೊಸಟ್ಟಿಯ ಸಿದ್ದಪ್ಪ ಹೊಸಮನಿ    

ಮೂಡಲಗಿ (ಬೆಳಗಾವಿ): ತಾಲ್ಲೂಕಿನ ಹೊಸಟ್ಟಿ ಗ್ರಾಮದ ಸಿದ್ದಪ್ಪ ಪಾಂಡಪ್ಪ ಹೊಸಮನಿ ಅವರು 60 ಕೆ.ಜಿ., 80 ಕೆ.ಜಿ., 100 ಕೆ.ಜಿ. ಹೀಗೆ... ವಿವಿಧ ಭಾರದ ಸಂಗ್ರಾಣಿ ಕಲ್ಲುಗಳನ್ನು ನೆಲದಿಂದ ಒಂದೇ ಕೈಯಿಂದ ಸಲೀಸಾಗಿ ಎತ್ತುವುದರಲ್ಲಿ ನಿಸ್ಸೀಮ. 120 ಕೆ.ಜಿ. ತೂಕದ ಸಂಗ್ರಾಣಿ ಕಲ್ಲು ಎತ್ತಿರುವುದು ಅವರ ಇತ್ತೀಚಿನ ದಾಖಲೆ. 12 ವರ್ಷಗಳಿಂದ ಸಂಗ್ರಾಣಿ ಕಲ್ಲು ಎತ್ತುವ ಗ್ರಾಮೀಣ ಕ್ರೀಡೆಯಲ್ಲಿ ಮಾಡಿರುವ ಸಾಧನೆಗೆ ರಾಜ್ಯ ಸರ್ಕಾರವು ಈಚೆಗೆ ಅವರಿಗೆ ‘ಕರ್ನಾಟಕ ಕ್ರೀಡಾ ರತ್ನ’ ಪ್ರಶಸ್ತಿ ಪ್ರಕಟಿಸಿದೆ. ಈ ಮೂಲಕ ದೇಸಿ ಕ್ರೀಡೆಗೆ ಗರಿ ಮೂಡಿದೆ.

ಸಾಧನೆಯ ದಾರಿ: ಜಾತ್ರೆ, ಉತ್ಸವ, ಸಮ್ಮೇಳನಗಳು ಸೇರಿದಂತೆ ನೂರಾರು ಕಡೆಯಲ್ಲಿ ಸಂಗ್ರಾಣಿ ಕಲ್ಲು ಎತ್ತುವ ಪ್ರದರ್ಶನ ನೀಡಿ ಭಲೇ ಎನಿಸಿಕೊಂಡಿದ್ದಾರೆ ಸಿದ್ದಪ್ಪ. ಹೋದ ಕಡೆಯಲ್ಲಿ ಜನಮೆಚ್ಚುಗೆ ಪಡೆದುಕೊಂಡಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರದಲ್ಲಿ ನಡೆದ ಹಲವಾರು ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ADVERTISEMENT

‘ಸ್ಪರ್ಧೆಗೆ ಹೋದ ಕಡೆಯಲ್ಲಿ ಸಿದ್ದಪ್ಪ ಬಹುಮಾನ ಇಲ್ಲದೆ ಬರಿಗೈಯಲ್ಲಿ ಎಂದೂ ಬಂದಿಲ್ಲರೀ’ ಎಂದು ಸಿದ್ದಪ್ಪ ಸ್ಪರ್ಧಿಸುವ ಕಡೆಗೆಲ್ಲ ಜೊತೆ ತೆರಳುವ ಅವರ ಸ್ನೇಹಿತರಾದ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಜಗದೀಶ ಡೊಳ್ಳಿ ಮತ್ತು ವಿನಾಯಕ ನಾಯಕ ಅಭಿಮಾನದಿಂದ ಹೇಳುತ್ತಾರೆ.

‘ನಮ್ಮೂರ ಲಕ್ಷ್ಮೀದೇವಿ ಜಾತ್ರೆಯಲ್ಲಿ ಕಲ್ಲು ಎತ್ತುವ ಸ್ಪರ್ಧೆ ನೋಡಿ ನಾನು ಅವರಂತೆ ಕಲ್ಲು ಎತ್ತಬೇಕು ಎಂದು ಮನಸ್ಸು ಮಾಡಿದೆ. ನನ್ನ 22ನೇ ವಯಸ್ಸಿನಲ್ಲಿ ಸಂಗ್ರಾಣಿ ಕಲ್ಲು ಎತ್ತುವ ತಾಲೀಮ ಶುರು ಮಾಡಿದೆ’ ಎಂದು ತಮ್ಮ ಸಾಧನೆಗೆ ಪ್ರೇರಣೆಯಾದ ಘಟನೆಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು ಸಿದ್ದಪ್ಪ.

ಬೆಳಿಗ್ಗೆ ಹಾಗೂ ಸಂಜೆ ತಲಾ 2 ತಾಸು ಸಂಗ್ರಾಣಿ ಕಲ್ಲು ಎತ್ತುವ ತಾಲೀಮು ಮಾಡುತ್ತಿದ್ದಾರೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ 35ಕ್ಕೂ ಹೆಚ್ಚು ಬೇರೆ ಬೇರೆ ತೂಕದ ಸಂಗ್ರಾಣಿ ಕಲ್ಲುಗಳನ್ನು ಮುಧೋಳದಿಂದ ತಂದು ಸಂಗ್ರಹಿಸಿದ್ದಾರೆ.

‘ಗ್ರಾಮದಲ್ಲಿರುವ ಮಾರುತಿ ಕುರಬೇಟ ಪೈಲ್ವಾನ್‌ ಅವರು ನನಗೆ ಕಲ್ಲು ಎತ್ತುವ ಬಗ್ಗೆ ಎಲ್ಲ ಪಟ್ಟುಗಳನ್ನು ಹೇಳಿಕೊಟ್ಟರೆ, ನನ್ನ ಚಿಕ್ಕಪ್ಪ ನಾಮದೇವ ಹೊಸಮನಿ, ಯಮನಪ್ಪ ಹೊಸಮನಿ ಮತ್ತು ಅತ್ತೆ ದಿ.ತುಳಸವ್ವ ತಳವಾರ ಸಾಧನೆ ಮಾಡಲು ನಿರಂತರವಾಗಿ ಪ್ರೋತ್ಸಾಹ ನೀಡಿದ್ದಾರೆ’ ಎಂದು ನೆನೆದರು ಸಿದ್ದಪ್ಪ.

2013 ಮತ್ತು 2014ರಲ್ಲಿ ಎರಡು ಬಾರಿ ಕಿತ್ತೂರು ಉತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದರೆ. ನಾಡಿನ ವಿವಿಧೆಡೆ ಬಹಳಷ್ಟು ನಗದು ಬಹುಮಾನ ಮತ್ತು ಬೆಳ್ಳಿ ಕಡಗಗಳನ್ನು ಗೆದ್ದುಕೊಂಡಿದ್ದಾರೆ. ಇದೆಲ್ಲವನ್ನೂ ಗುರುತಿಸಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಪ್ರಶಸ್ತಿಗೆ ಆಯ್ಕೆ ಮಾಡಿದೆ.

35 ವರ್ಷದ ಸಿದ್ದಪ್ಪ ನಿತ್ಯ ಕಲ್ಲು ಎತ್ತುವ ತಾಲೀಮು ನಡೆಸುತ್ತಿದ್ದಾರೆ. ಕೆಲವು ಯುವಕರಿಗೆ ಕಲ್ಲು ಎತ್ತುವ ಕಸರತ್ತು ಕಲಿಸುವ ಮೂಲಕ ಗ್ರಾಮೀಣ ಕ್ರೀಡೆಯನ್ನು ಬೆಳೆಸುತ್ತಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಯು ₹1 ಲಕ್ಷ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಸಂಪರ್ಕಕ್ಕೆ ಮೊ.ಸಂಖ್ಯೆ: 9611371945 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.