ಒಡೆನ್ಸ್, ಡೆನ್ಮಾರ್ಕ್: ಭಾರತದ ಪಿ.ವಿ. ಸಿಂಧು ಮತ್ತು ಆಕರ್ಷಿ ಕಶ್ಯಪ್ ಅವರು ಮಂಗಳವಾರ ಆರಂಭಗೊಂಡ ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಎರಡನೇ ಸುತ್ತಿಗೆ ಮುನ್ನಡೆದರು. ಆದರೆ, ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು 21–14, 18–21, 21–10 ರಿಂದ ಸ್ಕಾಟ್ಲೆಂಡ್‌ನ ಕಿರ್ಸ್ಟಿ ಗಿಲ್ಮೊರ್ ಅವರನ್ನು ಹಿಮ್ಮೆಟ್ಟಿಸಿದರು. 56 ನಿಮಿಷ ನಡೆದ ಮ್ಯಾರಥಾನ್‌ನಲ್ಲಿ ಸಿಂಧು ಮೊದಲ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದರೂ ಎರಡನೇ ಗೇಮ್‌ನಲ್ಲಿ ಮುಗ್ಗರಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಹಿಡಿತ ಸಾಧಿಸಿದರು. ಅವರು ಮುಂದಿನ ಸುತ್ತಿನಲ್ಲಿ 7ನೇ ಶ್ರೇಯಾಂಕದ ಇಂಡೊನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರ ಸವಾಲನ್ನು ಎದುರಿಸುವರು.
ಮತ್ತೊಂದು ಪಂದ್ಯದಲ್ಲಿ 38ನೇ ಕ್ರಮಾಂಕದ ಆಕರ್ಷಿ ಅವರು 10-21, 22-20, 21-12ರಿಂದ ವಿಶ್ವದ 26ನೇ ರ‍್ಯಾಂಕ್‌ನ ಲಿ ಯೊವೊನ್ನೆ (ಜರ್ಮನಿ) ಅವರನ್ನು ಮಣಿಸಿದರು. ಅವರು ಮುಂದಿನ ಸುತ್ತಿನಲ್ಲಿ 19ನೇ ಕ್ರಮಾಂಕದ ಥಾಯ್ಲೆಂಡ್‌ನ ಸುಪಾನಿಡಾ ಕಟೆಥೋಂಗ್ ಅವರನ್ನು ಎದುರಿಸುವರು. ಈ ವರ್ಷದ ಸಿಂಗಪುರ ಓಪನ್ ಟೂರ್ನಿಯಲ್ಲಿ ಅವರು ಆಕರ್ಷಿ ಅವರನ್ನು ಸೋಲಿಸಿದ್ದರು.
2021ರ ವಿಶ್ವ ಚಾಂಪಿಯನ್‌ಷಿಪ್‌ನ ಬೆಳ್ಳಿ ಪದಕ ವಿಜೇತ ಕಿದಂಬಿ ಶ್ರೀಕಾಂತ್ ಅವರು 21-19, 10-21, 16-21 ರಿಂದ ಚೀನಾದ ವೆಂಗ್ ಹಾಂಗ್ ಯಾಂಗ್ ಅವರಿಗೆ ಮಣಿದರು.
ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತರಾದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಟೂರ್ನಿಯಿಂದ ಹಿಂದೆ ಸರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.