ಚಾಂಗ್‌ಜೌ, ಚೀನಾ (ಪಿಟಿಐ): ಸುಲಭ ಜಯ ಸಂಪಾದಿಸಿದ ವಿಶ್ವ ಚಾಂಪಿಯನ್ ಆಟಗಾರ್ತಿ ಭಾರತದ ಪಿ.ವಿ.ಸಿಂಧು ಬುಧವಾರ ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆದರೆ ಇನ್ನೋರ್ವ ಭರವಸೆಯ ಶಟ್ಲರ್ ಸೈನಾ ನೆಹ್ವಾಲ್ ಮುಗ್ಗರಿಸಿದ್ದಾರೆ.
ಸಿಂಧು ಅವರು ಚೀನಾದ ಲೀ ಕ್ಸೆರುಯ್ ವಿರುದ್ಧದ ಹಣಾಹಣಿಯಲ್ಲಿ 21–18, 21–12 ಗೇಮ್‌ಗಳಿಂದ ಗೆದ್ದರು. ಕೇವಲ 34 ನಿಮಿಷಗಳಲ್ಲಿ ಪಂದ್ಯ ಮುಗಿಯಿತು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತೋರಿದ ಅದ್ಭುತ ಲಯವನ್ನುಸಿಂಧು ಇಲ್ಲಿಯೂ ಮುಂದುವರಿಸಿದರು. 20ನೇ ರ‍್ಯಾಂಕಿನಚೀನಾ ಆಟಗಾರ್ತಿಯ ಎದುರು ಅವರು ಈ ಹಿಂದೆ 3–3 ಗೆಲುವು–ಸೋಲು ಕಂಡಿದ್ದರು.
ಲಂಡನ್ ಒಲಿಂಪಿಕ್ಸ್ ಕಂಚು ವಿಜೇತೆ ಸೈನಾ ನೆಹ್ವಾಲ್ ಥಾಯ್ಲೆಂಡ್‌ನ ಬುಸಾನನ್ ಒಂಗ್‌ಬಮ್ರುಂಗ್‌ಫನ್ ಎದುರು 10–21, 17–21ರಿಂದ ಮಣಿದರು. ಸೈನಾ ಅವರನ್ನು ಸೋಲಿಸಲು ಥಾಯ್ಲೆಂಡ್ ಆಟಗಾರ್ತಿಗೆ ಕೇವಲ 44 ನಿಮಿಷ ಸಾಕಾದವು. ಭಾರತದ ಆಟಗಾರ್ತಿಗೆ ಬುಸಾನನ್ ವಿರುದ್ಧ ದಕ್ಕಿದ ಸತತ ಎರಡನೇ ಸೋಲು ಇದು. ಗಾಯಗಳಿಂದ ಚೇತರಿಸಿಕೊಂಡ ಬಳಿಕ ಸೈನಾ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ.
ದಿನದ ಇತರ ಪಂದ್ಯಗಳಲ್ಲಿ ಬಿ.ಸಾಯಿ ಪ್ರಣೀತ್ ಅವರು ಥಾಯ್ಲೆಂಡ್‌ನ ಸುಪ್ಪನ್ಯು ಅವಿಹಿಂಗ್‌ಸನಾನ್ ಎದುರು 21–19, 21–13, 21–14ರಿಂದ ಗೆದ್ದು ಮುನ್ನಡೆದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್ ಜೆರಿ ಚೋಪ್ರಾ–ಎನ್.ಸಿಕ್ಕಿ ರೆಡ್ಡಿ ಜೋಡಿಯು ಜರ್ಮನಿಯ ಮಾರ್ಕ್ ಲಾಮ್ಸ್‌ಫಸ್–ಇಸಾಬೆಲ್ ಹರ್‌ಟ್ರಿಚ್ ಎದುರು 12–21, 21–13ರಿಂದ ನಿರಾಸೆ ಅನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.