ಟೋಕಿಯೊ: ಭಾರತದ ಪ್ರಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರ ಪ್ರಶಸ್ತಿ ಕನಸು ಜಪಾನ್ ಓಪನ್ ಟೂರ್ನಿಯಲ್ಲೂ ಕೈಗೂಡಲಿಲ್ಲ. ಇಂಡೊನೇಷ್ಯಾ ಓಪನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರು ಮುಗ್ಗರಿಸಿದ್ದ ಸಿಂಧು, ಅದೇ ಎದುರಾಳಿಗೆ ಶುಕ್ರವಾರ ಮತ್ತೊಮ್ಮೆ ಸೋತರು. ಇನ್ನೊಂದೆಡೆ ಉತ್ತಮ ಆಟವಾಡಿದಸಾಯಿ ಪ್ರಣೀತ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.
ಸಿಂಧು ಅವರು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ 18–21, 15–21 ಗೇಮ್‌ಗಳಿಂದ ಯಮಗುಚಿಗೆ ಮಣಿದರು. 50 ನಿಮಿಷಗಳಲ್ಲಿ ಈ ಹಣಾಹಣಿ ಮುಗಿಯಿತು. ಮೊದಲ ಗೇಮ್‌ನಲ್ಲಿಭಾರತದ ಆಟಗಾರ್ತಿ 12–7ರಿಂದ ಮುನ್ನಡೆಯಲಿದ್ದರು. ಹಾಲಿ ಏಷ್ಯನ್ ಚಾಂಪಿಯನ್ ಯಮಗುಚಿ 14–14ರ ಸಮಬಲ ಸಾಧಿಸಿ ತಿರುಗೇಟು ನೀಡಿದರು. ಅದೇ ರೀತಿಯ ಆಟ ಮುಂದುವರಿಸಿದ ಯಮಗುಚಿ, ಗೇಮ್ ಗೆದ್ದು ಬೀಗಿದರು.
ಎರಡನೇ ಗೇಮ್‌ನ ಆರಂಭದಲ್ಲೂ ತೀವ್ರ ಸೆಣಸಾಟ ಕಂಡುಬಂತು. 6–6ವರೆಗೆ ಸಮಬಲ ಕಂಡ ಬಳಿಕ, ಆಕ್ರಮಣಕಾರಿಯಾದ ಯಮಗುಚಿ 13–7ರಿಂದ ಭಾರಿ ಮುನ್ನಡೆ ಪಡೆದರು. ಈ ಮುನ್ನಡೆ 16–10ಕ್ಕೆ ತಲುಪಿತು. ಸಿಂಧು ಸತತ ಎರಡು ಪಾಯಿಂಟ್ ದಾಖಲಿಸಿದರೂ, ಯಮಗುಚಿ ಐದು ಪಾಯಿಂಟ್ ಗಳಿಸಿ ಸುಲಭ ಜಯ ಸಂಪಾದಿಸಿದರು.
ಕೇವಲ 36 ನಿಮಿಷದಲ್ಲಿ ಮುಗಿದ ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸಾಯಿ ಪ‍್ರಣೀತ್, ಇಂಡೊನೇಷ್ಯಾದ ಟಾಮಿ ಸುಗಿಯರ್ತೊ ವಿರುದ್ಧ 21–12, 21–15ರಿಂದ ಜಯಭೇರಿ ಮೊಳಗಿಸಿದರು. ಶ್ರೇಯಾಂಕರಹಿತ ಭಾರತದ ಆಟಗಾರ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದರು. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಈ ಹಿಂದೆ ಕಂಚು ಗೆದ್ದಿದ್ದ ಸುಗಿಯರ್ತೊ, ಯಾವ ಹಂತದಲ್ಲೂ ಪ್ರಣೀತ್‌ಗೆ ಸಾಟಿಯಾಗಲೇ ಇಲ್ಲ.
ಸೆಮಿಫೈನಲ್ ಪಂದ್ಯದಲ್ಲಿ ಪ್ರಣೀತ್ ಅವರು ಅಗ್ರಶ್ರೇಯಾಂಕದ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಕಣಕ್ಕಿಳಿಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.