ADVERTISEMENT

ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸಿಂಧು, ಸಮೀರ್‌ ಮೇಲೆ ನಿರೀಕ್ಷೆ

ಸೈನಾ ಕಣಕ್ಕೆ

ಪಿಟಿಐ
Published 25 ಅಕ್ಟೋಬರ್ 2021, 14:09 IST
Last Updated 25 ಅಕ್ಟೋಬರ್ 2021, 14:09 IST
ಸಮೀರ್ ವರ್ಮಾ– ಪಿಟಿಐ ಚಿತ್ರ
ಸಮೀರ್ ವರ್ಮಾ– ಪಿಟಿಐ ಚಿತ್ರ   

ಪ್ಯಾರಿಸ್‌: ನಿರಾಸೆ ಮರೆತು ಮುನ್ನುಗ್ಗುವ ಛಲದಲ್ಲಿರುವ ಭಾರತದ ಬ್ಯಾಡ್ಮಿಂಟನ್‌ ಪಟುಗಳು ಮಂಗಳವಾರ ಇಲ್ಲಿ ಆರಂಭವಾಗುವ ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

ಎರಡು ಒಲಿಂಪಿಕ್ಸ್ ಪದಕ ಗೆದ್ದಿರುವ ಪಿ.ವಿ. ಸಿಂಧು, ಲಂಡನ್‌ ಒಲಿಂಪಿಕ್ಸ್ ಕಂಚು ವಿಜೇತ ಸೈನಾ ನೆಹ್ವಾಲ್‌ ಹಾಗೂ ಸಮೀರ್ ವರ್ಮಾ ಭಾರತದ ಭರವಸೆಯಾಗಿದ್ದಾರೆ.

ಕಳೆದ ವಾರ ಮುಕ್ತಾಯವಾದ ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಸಿಂಧು ಕ್ವಾರ್ಟರ್‌ಫೈನಲ್‌ನಲ್ಲಿ ಎಡವಿದ್ದರು.

ADVERTISEMENT

ಈ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಅವರು ಡೆನ್ಮಾರ್ಕ್‌ನ ಜೂಲಿ ಡವಾಲ್‌ ಜಾಕೋಬ್‌ಸನ್ ಅವರನ್ನು ಎದುರಿಸಲಿದ್ದಾರೆ. ಪ್ರಶಸ್ತಿ ಜಯದ ಕನಸು ಈಡೇರಬೇಕಾದರೆ ಅವರು ಆಕ್ರಮಣಕಾರಿ ಶೈಲಿಯ ಆಟಕ್ಕೆ ಮರಳಬೇಕಿದೆ. ಮೊದಲ ಹಣಾಹಣಿಯಲ್ಲಿ ಗೆದ್ದರೆ ಸಿಂಧು ಅವರಿಗೆ ಮುಂದಿನ ಪಂದ್ಯಗಳಲ್ಲಿ ಡೆನ್ಮಾರ್ಕ್‌ನ ಲಿನ್‌ ಕ್ರಿಸ್ಟೊಫರ್ಸನ್‌ ಅವರನ್ನು ಎದುರಿಸುವ ಸಾಧ್ಯತೆಯಿದೆ.

ಡೆನ್ಮಾರ್ಕ್‌ ಓಪನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ನಿರ್ಗಮಿಸಿದ್ದ ಸೈನಾ ಇಲ್ಲಿ ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಜಪಾನ್‌ನ ಸಯಕಾ ತಕಹಶಿ ಎದುರು ಆಡಲಿದ್ದಾರೆ.

ಸಮೀರ್‌ ವರ್ಮಾ ಡೆನ್ಮಾರ್ಕ್‌ ಓಪನ್ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ಎಂಟರಘಟ್ಟ ತಲುಪಿದ್ದರು. ಆದರೆ ಗಾಯದ ಹಿನ್ನೆಲೆಯಲ್ಲಿ ಕ್ವಾರ್ಟರ್‌ಫೈನಲ್‌ನಿಂದ ಹಿಂದೆ ಸರಿದಿದ್ದರು. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಅವರು ಇಂಡೊನೇಷ್ಯಾದ ಕೆಂಟೊ ಮೊಮೊಟಾ ಎದುರು ಆಡಲಿದ್ದಾರೆ.

ಸಿಂಗಲ್ಸ್ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಬಿ.ಸಾಯಿ ಪ್ರಣೀತ್‌, ಎಚ್‌.ಎಸ್‌. ಪ್ರಣಯ್‌, ಸೌರಭ್‌ ವರ್ಮಾ ಹಾಗೂ ಪರುಪಳ್ಳಿ ಕಶ್ಯಪ್ ಕೂಡ ಕಣಕ್ಕಿಳಿಯುವರು.

ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ, ಎಂ.ಆರ್‌. ಅರ್ಜುನ– ಧೃವ ಕಪಿಲ, ಮನು ಅತ್ರಿ–ಬಿ.ಸುಮೀತ್ ರೆಡ್ಡಿ ಆಡಲಿದ್ದರೆ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ಎನ್‌.ಸಿಕ್ಕಿರೆಡ್ಡಿ, ಮೇಘನಾ ಜಕ್ಕಂಪುಡಿ– ಎಸ್‌. ರಾಮ್‌ ಪೂರ್ವಿಶಾ ಜೋಡಿಗಳು ಅದೃಷ್ಟ ಪರೀಕ್ಷಿಸಲಿದ್ದಾರೆ.

ಸಾತ್ವಿಕ್‌ಸಾಯಿರಾಜ್‌– ಅಶ್ವಿನಿ ಮಿಶ್ರ ಡಬಲ್ಸ್‌ನಲ್ಲಿ ಆಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.