ಪ್ಯಾರಿಸ್: ಕಳೆದ ಮೂರು ಒಲಿಂಪಿಕ್ಸ್‌ಗಳಲ್ಲೂ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಪದಕ ಒಲಿದಿದೆ. ಹೀಗಾಗಿ, ಈ ಬಾರಿಯೂ ಬ್ಯಾಡ್ಮಿಂಟನ್ ಆಟಗಾರರ ಮೇಲೆ ಪದಕ ನಿರೀಕ್ಷೆ ಹೆಚ್ಚಿದೆ.
ಭಾರತದ ಸ್ಪರ್ಧಿಗಳು ಶನಿವಾರದಿಂದ ತಮ್ಮ ವಿಭಾಗಗಳಲ್ಲಿ ಅಭಿಯಾನ ಆರಂಭಿಸುವರು. ಪುರುಷರ ಸಿಂಗಲ್ಸ್‌ನಲ್ಲಿ ಎಚ್.ಎಸ್. ಪ್ರಣಯ್, ಲಕ್ಷ್ಮ ಸೇನ್, ಡಬಲ್ಸ್‌ನಲ್ಲಿ ಚಿರಾಗ್ ಶೆಟ್ಟಿ– ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ, ಮಹಿಳೆಯರ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ತನಿಶಾ ಕ್ರಾಸ್ಟೊ ಕಣದಲ್ಲಿದ್ದಾರೆ.
ಬ್ಯಾಡ್ಮಿಂಟನ್‌ನಲ್ಲಿ ಭಾರತವು ಈತನಕ ಒಟ್ಟು ಮೂರು ಒಲಿಂಪಿಕ್ ಪದಕಗಳನ್ನು ಗೆದ್ದಿದೆ. ಆದರೆ, ಚಿನ್ನದ ಪದಕ ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
2012ರ ಲಂಡನ್ ಕ್ರೀಡಾಕೂಟದ ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚು ಗೆದ್ದು, ಮೊದಲ ಒಲಿಂಪಿಕ್ ಪದಕ ತಂದುಕೊಟ್ಟರು. 2016 ಮತ್ತು 2020ರಲ್ಲಿ ಪಿ.ವಿ. ಸಿಂಧು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದಿದ್ದಾರೆ.
ವಿಶ್ವದ ಮಾಜಿ ನಂಬರ್ 1 ಜೋಡಿ ಸಾತ್ವಿಕ್ ಮತ್ತು ಚಿರಾಗ್ ಮೇಲೆ ಚಿನ್ನದ ನಿರೀಕ್ಷೆ ಹೆಚ್ಚಿದೆ. ಈ ತರುಣರು ಕಳೆದ ವರ್ಷದ ಏಷ್ಯನ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಚಿನ್ನದ ಸಾಧನೆ ಮಾಡಿದ್ದರು. ಜೊತೆಗೆ ಮಾರ್ಚ್‌ನಲ್ಲಿ ಫ್ರೆಂಚ್ ಓಪನ್ ಕಿರೀಟವನ್ನೂ ಮುಡಿಗೇರಿಸಿಕೊಂಡಿದ್ದರು.
ವಿಶ್ವ ಕ್ರಮಾಂಕದಲ್ಲಿ 13ನೇ ಸ್ಥಾನದಲ್ಲಿರುವ ಸಿಂಧು ಮೇಲೆಯೂ ಪದಕದ ಭರವಸೆ ಇಡಲಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿದಂತೆ ದಾಖಲೆಯ ಐದು ಪದಕ ಗೆದ್ದಿರುವ 29 ವರ್ಷದ ಸಿಂಧು, ಹ್ಯಾಟ್ರಿಕ್ ಪದಕದ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಕೆನಡಾ ಓಪನ್ ಚಾಂಪಿಯನ್ ಲಕ್ಷ್ಯ ಸೇನ್, ಏಷ್ಯನ್ ಗೇಮ್ಸ್ ಕಂಚು ವಿಜೇತ ಪ್ರಣಯ್ ಅವರೂ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.