ADVERTISEMENT

Denmark Open | ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ಸಿಂಧು, ಸೇನ್

ಪಿಟಿಐ
Published 14 ಅಕ್ಟೋಬರ್ 2024, 14:05 IST
Last Updated 14 ಅಕ್ಟೋಬರ್ 2024, 14:05 IST
<div class="paragraphs"><p>ಬ್ಯಾಡ್ಮಿಂಟನ್‌ (ಪ್ರಾತಿನಿಧಿಕ ಚಿತ್ರ)</p></div>

ಬ್ಯಾಡ್ಮಿಂಟನ್‌ (ಪ್ರಾತಿನಿಧಿಕ ಚಿತ್ರ)

   

ಒಡೆನ್ಸ್‌ (ಡೆನ್ಮಾರ್ಕ್): ಬ್ಯಾಡ್ಮಿಂಟನ್‌ಗೆ ಪುನರಾಗಮನದ ಬಳಿಕ ನಿರಾಶೆ ಅನುಭವಿಸಿರುವ ಭಾರತದ ಪ್ರಮುಖ ತಾರೆಗಳಾದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರಿಗೆ ಈಗ ಲಯಕ್ಕೆ ಮರಳಲು ಮತ್ತೊಂದು ಅವಕಾಶವಿದೆ. ಮಂಗಳವಾರ ಆರಂಭವಾಗುವ ಡೆನ್ಮಾರ್ಕ್ ಓಪನ್ 750 ಮಟ್ಟದ ಟೂರ್ನಿಯಲ್ಲಿ ಇವರಿಬ್ಬರು ಉತ್ತಮ ಆಟದ ನಿರೀಕ್ಷೆಯಲ್ಲಿದ್ದಾರೆ.

ಇತ್ತೀಚೆಗೆ ಫಿನ್ಲೆಂಡ್‌ನ ವಾಂಟಾದಲ್ಲಿ ನಡೆದ ಆರ್ಕ್ಟಿಕ್ ಓಪನ್ ಟೂರ್ನಿಯಲ್ಲಿ ಇಬ್ಬರೂ ವಿಫಲರಾಗಿದ್ದರು. ಮಾಜಿ ವಿಶ್ವ ಚಾಂಪಿಯನ್ ಸಿಂಧು ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದ ಸೇನ್ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದ್ದರು.

ADVERTISEMENT

ಬಿಡಬ್ಲ್ಯುಎಫ್‌ ವಿಶ್ವ ಟೂರ್‌ನ 13ನೇ ಟೂರ್ನಿ ಇದಾಗಿದ್ದು, ₹7.14 ಕೋಟಿ ಬಹುಮಾನ ಹೊಂದಿದೆ.

23 ವರ್ಷವಯಸ್ಸಿನ ಸೇನ್ ಮೊದಲ ಸುತ್ತಿನಲ್ಲಿ ಚೀನಾದ ಲು ಗುವಾಂಗ್ ವಿರುದ್ಧ ಆಡಲಿದ್ದಾರೆ. ಇದೇ ಮೊದಲ ಬಾರಿ ಇವರಿಬ್ಬರ ಮುಖಾಮುಖಿ ನಡೆಯುತ್ತಿದೆ. ಎರಡನೇ ಸುತ್ತಿಗೇರಿದಲ್ಲಿ ಇಂಡೊನೇಷ್ಯಾದ ಜೊನಾಥನ್ ಕ್ರಿಸ್ಟಿ ಸವಾಲು ಎದುರಾಗಬಹುದು. ಕ್ವಾರ್ಟರ್‌ಫೈನಲ್‌ ತಲುಪಿದಲ್ಲಿ ಹಾಲಿ ವಿಶ್ವ ಚಾಂಪಿಯನ್ ಕುನ್ಲಾವುತ್‌ ವಿಟಿಡ್‌ಸರ್ನ್ ಸಂಭವನೀಯ ಎದುರಾಳಿಯಾಗುತ್ತಾರೆ.

ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಸಿಂಧು, ಚೀನಾ ತೈಪಿಯ ಪೈ ಯು ಪೊ ವಿರುದ್ಧ ಆಡುವ ಮೂಲಕ ಇಲ್ಲಿ ಅಭಿಯಾನ ಆರಂಭಿಸುವರು. ಎರಡನೇ ಸುತ್ತಿಗೇರಿದಲ್ಲಿ ಚೀನಾದ ಹ್ಯಾನ್ ಯು ಎದುರಾಳಿಯಾಗುವ ಸಾಧ್ಯತೆಯಿದೆ.

ಸಿಂಧು ಬಿಟ್ಟರೆ ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋಡ್‌, ಆಕರ್ಷಿ ಕಶ್ಯಪ್ ಮತ್ತು ಉದಯೋನ್ಮುಖ ಆಟಗಾರ್ತಿ ಉನ್ನತಿ ಹೂಡಾ ಕೂಡ ಕಣದಲ್ಲಿದ್ದಾರೆ.

ಮಹಿಳಾ ಸಿಂಗಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿ ಸ್ಪರ್ಧಿಸಲಿದೆ. ಇವರು ಮೊದಲ ಸುತ್ತಿನಲ್ಲಿ ಐದನೇ ಶ್ರೇಯಾಂಕದ ಮಲೇಷ್ಯಾ ಆಟಗಾರ್ತಿಯರನ್ನು (ಪರ್ಲಿ ತಾನ್– ತಿನ್ನಾ ಮುರಳೀಧರನ್) ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.