ಲಖನೌ: ಭಾರತದ ತಾರೆಯರಾದ ಪಿ.ವಿ. ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಸಯ್ಯದ್ ಮೋದಿ ಇಂಟರ್‌ನ್ಯಾಷನಲ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲನ್ನು ಮುನ್ನಡೆಸುವ ಜೊತೆಗೆ ಪ್ರಶಸ್ತಿಯ ಬರ ನೀಗಿಸುವ ಛಲದಲ್ಲಿದ್ದಾರೆ.
ಕಳೆದ ವಾರ ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಜ್ ಶೆಟ್ಟಿ ಅವರೂ ಕಣಕ್ಕೆ ಇಳಿಯಲಿದ್ದು, ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ.
ಪ್ರಸಕ್ತ ವರ್ಷ ಒಲಿಂಪಿಕ್ಸ್, ಫ್ರೆಂಚ್ ಓಪನ್ ಮತ್ತು ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸೆಮಿಫೈನಲ್ ತಲುಪಿದ್ದ 23 ವರ್ಷ ವಯಸ್ಸಿನ ಸೇನ್ ಅವರೂ ಪ್ರಶಸ್ತಿಯ ಬರವನ್ನು ಎದುರಿಸುತ್ತಿದ್ದಾರೆ. ಇಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಅವರು ಪ್ರಶಸ್ತಿ ಜಯಿಸುವ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿದ್ದು, ಅವರಿಗೆ ಎರಡನೇ ಶ್ರೇಯಾಂಕದ ಪ್ರಿಯಾಂಶು ರಾಜಾವತ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಸೇನ್ ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್ ಆಟಗಾರನನ್ನು ಎದುರಿಸುವರು.
ಮೂರನೇ ಶ್ರೇಯಾಂಕದ ಕಿರಣ್ ಜಾರ್ಜ್, 2023ರ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ಆಯುಷ್ ಶೆಟ್ಟಿ, ಒಡಿಶಾ ಮಾಸ್ಟರ್ಸ್ ವಿಜೇತ ಸತೀಶ್ ಕರುಣಾಕರನ್ ಮತ್ತು ರಾಷ್ಟ್ರೀಯ ಚಾಂಪಿಯನ್ ಚಿರಾಗ್ ಸೇನ್ ಸೇರಿದಂತೆ ಭಾರತದ ಹಲವು ಭರವಸೆಯ ಆಟಗಾರರು ಸ್ಪರ್ಧೆಯಲ್ಲಿದ್ದಾರೆ.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ 29 ವರ್ಷ ವಯಸ್ಸಿನ ಸಿಂಧು ಇಲ್ಲಿ ಅಗ್ರ ಶ್ರೇಯಾಂಕ ಪಡೆದಿದ್ದು, ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಈ ವರ್ಷದ ಆರಂಭದಲ್ಲಿ ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದ ಅವರು ನಂತರ ಸತತ ವೈಫಲ್ಯ ಅನುಭವಿಸಿದ್ದಾರೆ. ಇಲ್ಲಿ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ಸ್ವದೇಶದ ಉದಯೋನ್ಮುಖ ಆಟಗಾರ್ತಿ ಅನ್ಮೋಲ್ ಖರ್ಬ್ ಅವರ ಸವಾಲನ್ನು ಎದುರಿಸಲಿದ್ದಾರೆ.
ಭಾರತದ ಯುವ ಆಟಗಾರ್ತಿಯರಾದ ಮಾಳವಿಕಾ ಬನ್ಸೋಡ್, ಆಕರ್ಷಿ ಕಶ್ಯಪ್, ಅನುಪಮಾ ಉಪಾಧ್ಯಾಯ, ರಕ್ಷಿತಾಶ್ರೀ ಸಂತೋಷ್ ರಾಮರಾಜ್, ಇಶಾರಾಣಿ, ಉನ್ನತಿ ಹೂಡಾ ಮೊದಲಾದವರು ಕಣದಲ್ಲಿದ್ದಾರೆ.
ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ– ತನೀಶಾ ಕ್ರಾಸ್ಟೊ, ಗಾಯತ್ರಿ ಗೋಪಿಚಂದ್– ಟ್ರೀಸಾ ಜೋಳಿ ಉತ್ತಮ ಪ್ರದರ್ಶನದ ವಿಶ್ವಾಸ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.