ಕುಮಮೊಟೊ (ಜಪಾನ್): ಭಾರತದ ಪಿ.ವಿ.ಸಿಂಧು ಮತ್ತು ಲಕ್ಷ್ಯ ಸೇನ್ ಅವರು ಮಂಗಳವಾರ ಆರಂಭವಾಗುವ ಕುಮಮೊಟೊ ಮಾಸ್ಟರ್ಸ್ ಜಪಾನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಲಯಕ್ಕೆ ಮರಳುವ ವಿಶ್ವಾಸದಲ್ಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಸಿಂಧು ಮತ್ತು ಲಕ್ಷ್ಯ ಸೇನ್ ಅವರು ತಮ್ಮ ಸಹಜ ಆಟ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಸಿಂಧು, ಡೆನ್ಮಾರ್ಕ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಲಕ್ಷ್ಯ ಸೇನ್ ಆರ್ಕ್ಟಿಕ್ ಸೂಪರ್ 500 ಮತ್ತು ಡೆನ್ಮಾರ್ಕ್ ಓಪನ್ ಟೂರ್ನಿಗಳಲ್ಲಿ ಬೇಗನೇ ಹೊರಬಿದ್ದಿದ್ದರು.
ಫಿನ್ಲೆಂಡ್‌ನಲ್ಲಿ ನಡೆದ ಆರ್ಕ್ಟಿಕ್ ಓಪನ್‌ನಲ್ಲಿ ಹೈದರಾಬಾದ್‌ನ ಆಟಗಾರ್ತಿ, ಕೆನಡಾದ ಮಿಚೆಲ್ ಲೀ ವಿರುದ್ಧ ಮೊದಲ ಸುತ್ತಿನಲ್ಲೇ ಸೋತು ಆಘಾತ ಅನುಭವಿಸಿದ್ದರು. ಒಡೆನ್ಸ್‌ನಲ್ಲಿ ನಡೆದ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು. ಆದರೆ, ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಮರಿಸ್ಕಾ ತಾಂಜುಂಗ್ (ಇಂಡೊನೇಷ್ಯಾ) ಎದುರು ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಆಟಗಾರ್ತಿ ಎಡವಿದ್ದರು.
ಈ ಹಿನ್ನಡೆಗಳ ಹೊರತಾಗಿಯೂ ಸಿಂಧು ತಮ್ಮ ತಯಾರಿ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದಾರೆ. ನೂತನ ಕೋಚ್‌ಗಳಾದ ಅನೂಪ್ ಶ್ರೀಧರ್ ಮತ್ತು ಕೊರಿಯಾದ ದಿಗ್ಗಜ ಲೀ ಸೀಯುನ್ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಸಿಂಧು, ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಬುಸಾನನ್ ಒಂಗ್ಬಾಮ್‌ರುಂಗ್‌ಫನ್ (ಥಾಯ್ಲೆಂಡ್) ಅವರನ್ನು ಎದುರಿಸಲಿದ್ದಾರೆ.
23 ವರ್ಷ ವಯಸ್ಸಿನ ಲಕ್ಷ್ಯ, ಮೊದಲ ಸುತ್ತಿನಲ್ಲಿ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ಅವರನ್ನು ಎದುರಿಸಲಿದ್ದಾರೆ.
ಮಹಿಳಾ ಡಬಲ್ಸ್ ವಿಭಾಗದಲ್ಲಿ ತ್ರೀಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ಕಣಕ್ಕಿಳಿಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.