ADVERTISEMENT

ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌–ಚಿರಾಗ್‌ ಮೇಲೆ ನಿರೀಕ್ಷೆ

ಪಿಟಿಐ
Published 11 ನವೆಂಬರ್ 2019, 19:42 IST
Last Updated 11 ನವೆಂಬರ್ 2019, 19:42 IST
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ (ಎಡ) ಹಾಗೂ ಚಿರಾಗ್‌ ಶೆಟ್ಟಿ
ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ (ಎಡ) ಹಾಗೂ ಚಿರಾಗ್‌ ಶೆಟ್ಟಿ   

ಹಾಂಗ್‌ಕಾಂಗ್‌: ಪುರುಷರ ಡಬಲ್ಸ್ ಜೋಡಿ ಭಾರತದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್‌ ಶೆಟ್ಟಿ ತಮ್ಮ ಅಮೋಘ ಲಯ ಮುಂದುವರಿಸುವ ತವಕದಲ್ಲಿದ್ದಾರೆ.

ಮಂಗಳವಾರ ಇಲ್ಲಿ ಆರಂಭ ವಾಗುವ ಹಾಂಗ್‌ಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸಿಂಗಲ್ಸ್ ಆಟಗಾರ್ತಿಯರಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್‌ ಆಟದ ಮೇಲೂ ಎಲ್ಲರ ಕಣ್ಣು ನೆಟ್ಟಿದೆ.

ವಿಶ್ವದ 9ನೇ ರ‍್ಯಾಂಕಿನ ಜೋಡಿ ಚಿರಾಗ್‌–ಸಾತ್ವಿಕ್‌, ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ರನ್ನರ್‌ಅಪ್‌ ಆಗಿದ್ದರು. ಹೋದ ವಾರ ಕೊನೆಗೊಂಡ ಚೀನಾ ಓಪನ್‌ ಟೂರ್ನಿಯಲ್ಲಿ ಸೆಮಿಫೈನಲ್‌ವರೆಗೂ ತಲುಪಿದ್ದರು. ಹಾಂಗ್‌ಕಾಂಗ್‌ ಓಪನ್‌ನ ಮೊದಲ ಪಂದ್ಯದಲ್ಲಿ ಅವರಿಗೆ ಜಪಾನ್‌ನ ತಕುರೊ ಹೊಕಿ– ಯುಗೊ ಕೊಬಾಯಶಿ ಜೋಡಿ ಎದುರಾಗಿದೆ.

ADVERTISEMENT

ಸಿಂಧು ಹಾಗೂ ಸೈನಾ ಇಬ್ಬರಿಗೂ ಇದು ಮಹತ್ವದ ಟೂರ್ನಿಯಾಗಿದ್ದು, ಆರಂಭದಲ್ಲೇ ನಿರ್ಗಮಿಸುವ ಚಾಳಿ ಯಿಂದ ಹೊರಬರಬರಲು ಉತ್ತಮ ಅವಕಾಶವಾಗಿದೆ. ಹೋದ ವಾರ ಚೀನಾ ಓಪನ್ ಟೂರ್ನಿಯಲ್ಲಿ ಇವರಿಬ್ಬರೂ ಮೊದಲ ಸುತ್ತಿನಲ್ಲೇ ಸವಾಲು ಅಂತ್ಯಗೊಳಿಸಿದ್ದರು.

ಸೈನಾ ಅವರು ಚೀನಾ ಓಪನ್‌ನ ಮೊದಲ ಸುತ್ತಿನಲ್ಲಿ ಆಡಿದ್ದ ಎದುರಾಳಿ ಚೀನಾದ ಕೈ ಯಾನ್‌ ಯಾನ್‌ ಅವರನ್ನೇ ಇಲ್ಲಿಯೂ ಎದುರಿಸಬೇಕಿದೆ. ಆರನೇ ಶ್ರೇಯಾಕದ ಸಿಂಧು ಅವರಿಗೆ ಕೊರಿಯಾದ ಕಿಮ್‌ ಗಾ ಯುನ್‌ ಮೊದಲ ತಡೆಯಾಗಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಆರಂಭಿಕ ಸುತ್ತಿನಲ್ಲಿ, ಎರಡು ಬಾರಿಯ ವಿಶ್ವ ಚಾಂಪಿಯನ್‌, ಸದ್ಯ ವಿಶ್ವ ನಂ.1 ಆಟಗಾರನಾಗಿರುವ ಜಪಾನ್‌ನ ಕೆಂಟೊ ಮೊಮೊಟಾ ಎದುರು ಆಡಲಿದ್ದಾರೆ. ಸಾಯಿ ಪ್ರಣೀತ್‌ ಅವರು ಚೀನಾ ಶಿ ಯೂ ಕಿ ವಿರುದ್ಧ, ಸಮೀರ್‌ ವರ್ಮಾ ಅವರು ತೈವಾನ್‌ನ ವಾಂಗ್‌ ಜು ವೇಯ್ ಎದುರು, ಎಚ್‌.ಎಸ್‌. ಪ್ರಣಯ್‌ ಅವರು ಚೀನಾದ ಹುವಾಂಗ್‌ ಯು ಎದುರು ಆಡುವರು. ಪರುಪಳ್ಳಿ ಕಶ್ಯಪ್‌ ಅವರಿಗೆ ಜಪಾನ್‌ ಕೆಂಟಾ ನಿಶಿಮೊಟೊ ಮೊದಲ ಸುತ್ತಿನ ಎದುರಾಳಿ.

ಮಿಶ್ರ ಡಬಲ್ಸ್‌ನಲ್ಲಿ ಸಾತ್ವಿಕ್‌– ಅಶ್ವಿನಿ ಪೊನ್ನಪ್ಪ, ಪ್ರಣವ್‌ ಜೆರಿ ಚೋಪ್ರಾ–ಎನ್‌.ಸಿಕ್ಕಿ ರೆಡ್ಡಿ ಜೋಡಿಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಮಹಿಳಾ ಡಬಲ್ಸ್‌ ವಿಭಾಗದಲ್ಲಿ ಅಶ್ವಿನಿ–ಸಿಕ್ಕಿ ರೆಡ್ಡಿ ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.