ADVERTISEMENT

ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್‌ಗೆ ನಿರಾಸೆ

ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು: ಬಿಂಗ್‌ಜಿಯಾವೊ, ಚೋ ಟೀನ್‌ಗೆ ಜಯ

ಪಿಟಿಐ
Published 9 ನವೆಂಬರ್ 2018, 20:15 IST
Last Updated 9 ನವೆಂಬರ್ 2018, 20:15 IST
ಚೋ ಟೀನ್ ಚೆನ್‌
ಚೋ ಟೀನ್ ಚೆನ್‌   

ಫುಜೊ: ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಅವರು ಚೀನಾ ಓಪನ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಕ್ರವಾರ ನಿರಾಸೆ ಅನುಭವಿಸಿದರು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ಇಬ್ಬರೂ ಹೊರ ಬಿದ್ದರು.

ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ಚೀನಾದ ಹೇ ಬಿಂಗ್‌ಜಿಯಾವೊ ಅವರ ಎದುರು ಸಿಂಧು 17–21, 21–17, 15–21ರಿಂದ ಸೋಲೊಪ್ಪಿಕೊಂಡರು. ಪುರುಷರ ಸಿಂಗಲ್ಸ್‌ನ ಎಂಟರ ಘಟ್ಟದ ಪಂದ್ಯದಲ್ಲಿ ಶ್ರೀಕಾಂತ್‌ ಅವರು ಚೋ ಟೀನ್ ಚೆನ್‌ಗೆ 14–21, 14–21ರಿಂದ ಮಣಿದರು.

ಇಂಡೊನೇಷ್ಯಾ ಓಪನ್ ಮತ್ತು ಫ್ರೆಂಚ್ ಓಪನ್ ಟೂರ್ನಿಗಳಲ್ಲಿ ಸಿಂಧು ಅವರನ್ನು ಮಣಿಸಿದ್ದ ಬಿಂಗ್‌ಜಿಯಾವೊ ಇಲ್ಲೂ ಪಾರಮ್ಯ ಮೆರೆದರು. ಆರಂಭದಲ್ಲಿ 3–8ರ ಹಿನ್ನಡೆ ಕಂಡರೂ ನಂತರ ಚೇತರಿಸಿಕೊಂಡರು. ಈ ಸಂದರ್ಭದಲ್ಲಿ ಸಿಂಧು ತಿರುಗೇಟು ನೀಡಿದರು. ಹೀಗಾಗಿ ಜಿದ್ದಾಜಿದ್ದಿಯ ಹೋರಾಟ ಕಂಡುಬಂತು. ಆದರೆ ಕೊನೆಯಲ್ಲಿ ಚೀನಾ ಆಟಗಾರ್ತಿ ಗೆಲುವು ತಮ್ಮದಾಗಿಸಿಕೊಂಡರು.

ADVERTISEMENT

ಎರಡನೇ ಗೇಮ್‌ನಲ್ಲೂ ಉಭಯ ಆಟಗಾರ್ತಿಯರು ಪ್ರಬಲ ಪೈಪೋಟಿ ನೀಡಿದರು. ಒಂದು ಹಂತದಲ್ಲಿ 6–5ರ ಮುನ್ನಡೆ ಗಳಿಸಿದ್ದ ಸಿಂಧು ನಂತರ 7–11ರ ಹಿನ್ನಡೆ ಅನುಭವಿಸಿದರು. ಆ ಮೇಲೆ ಸಿಂಧುಗೆ ಹಿಡಿತ ಸಾಧಿಸಲು ಆಗಲಿಲ್ಲ. ಹೀಗಾಗಿ ಬಿಂಗ್‌ಜಿಯಾವೊ ಗೆದ್ದು ಸಂಭ್ರಮಿಸಿದರು.

ಆರಂಭಿಕ ಮುನ್ನಡೆ ಗಳಿಸಿದ ಶ್ರೀಕಾಂತ್‌: ಪುರುಷರ ಸಿಂಗಲ್ಸ್‌ ಪಂದ್ಯವೂ ಪ್ರಬಲ ಪೈಪೋಟಿಗೆ ಸಾಕ್ಷಿಯಾಯಿತು. ಆರಂಭದಲ್ಲಿ 10–8ರಿಂದ ಮುನ್ನಡೆ ಗಳಿಸಿದ ಶ್ರೀಕಾಂತ್‌ ನಂತರ ಲಯ ತಪ್ಪಿದರು. ಹೀಗಾಗಿ ಜಯ ಗಳಿಸುವ ಕನಸು ಕಮರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.