ಪ್ಯಾರಿಸ್: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಗೆದ್ದಿರುವ ಭಾರತದ ಪಿ.ವಿ.ಸಿಂಧು ಅವರು ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶನಿವಾರ ನಿರಾಸೆ ಅನುಭವಿಸಿದರು. ಸೆಮಿಫೈನಲ್ ಹಣಾಹಣಿಯಲ್ಲಿ ಅವರು ಜಪಾನ್‌ನ ಸಯಾಕ ಟಕಹಾಶಿ ಎದುರು21-18, 16-21, 12-21ರಲ್ಲಿ ಸೋತರು.
ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ 29 ವರ್ಷದ ಟಕಹಾಶಿ ಎದುರು 26 ವರ್ಷದ ಸಿಂಧು ಈ ಹಿಂದೆ ಏಳು ಬಾರಿ ಸೆಣಿಸಿದ್ದರು. ಈ ಪೈಕಿ ಮೂರು ಬಾರಿ ಸೋತಿದ್ದರು. ಹಾಲಿ ವಿಶ್ವ ಚಾಂಪಿಯನ್ ಆಗಿರುವ ಸಿಂಧು ಕಳೆದ ವಾರ ನಡೆದ ಡೆನ್ಮಾರ್ಕ್ ಓಪನ್‌ನ ಎಂಟರ ಘಟ್ಟದಲ್ಲಿ ಸೋತಿದ್ದರು.
ಶನಿವಾರದ ಪಂದ್ಯದಲ್ಲಿ ಸಿಂಧು ಉತ್ತಮ ಆರಂಭ ಕಂಡಿದ್ದರು. ನಂತರ ಜಪಾನ್ ಆಟಗಾರ್ತಿ ತಿರುಗೇಟು ನೀಡಿದರು. ದೀರ್ಘ ರ‍್ಯಾಲಿಗಳಿಗೆ ಮೊರೆಹೋಗದೆ ಇಬ್ಬರೂ ಪಾಯಿಂಟ್‌ಗಳನ್ನು ಕಲೆ ಹಾಕುತ್ತ ಸಾಗಿದರು. ಹೀಗಾಗಿ 5–5, 9–9ರಲ್ಲಿ ಗೇಮ್ ಸಮಬಲ ಆಗಿತ್ತು. ಈ ಹಂತದಲ್ಲಿ ಪ್ರಬಲ ಸ್ಮ್ಯಾಷ್ ಮೂಲಕ ಟಕಹಾಶಿ ಮುನ್ನಡೆ ಸಾಧಿಸಿದರು. ಆದರೆ ಕ್ರಾಸ್ ಕೋರ್ಟ್ ಸ್ಮ್ಯಾಷ್ ಮೂಲಕ ಸಿಂಧು ಚೇತರಿಸಿಕೊಂಡರು. ಸಿಂಧು ಅವರು ಬ್ಯಾಕ್‌ಹ್ಯಾಂಡ್‌ನಲ್ಲಿ ಪಾಯಿಂಟ್‌ಗಳನ್ನು ಗಳಿಸಲು ವಿಫಲರಾದರು. ಇದರ ಲಾಭ ಪಡೆದ ಟಕಹಾಶಿ ಮೊದಲ ಗೇಮ್ ಗೆದ್ದುಕೊಂಡರು.
ಎರಡನೇ ಗೇಮ್‌ನ ಆರಂಭದಲ್ಲಿ ಸಿಂಧು 5–2ರ ಮುನ್ನಡೆ ಸಾಧಿಸಿದರು. ಚೇತರಿಸಿಕೊಂಡ ಟಕಹಾಶಿ 6–6ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಅಮೋಘ ಆಟದ ಮೂಲಕ ಸಿಂಧು 9–6ರಲ್ಲಿ ಮುನ್ನಡೆದರು. ನಂತರ ಟಕಹಾಶಿ 13–12ರ ಮುನ್ನಡೆ ಸಾಧಿಸಿದರು. 13–15ರ ಹಿನ್ನಡೆಯಲ್ಲಿದ್ದಾಗ ಸಿಂಧು ಭರ್ಜರಿ ಸ್ಮ್ಯಾಷ್ ಮೂಲಕ ಪಾಯಿಂಟ್ ಗಳಿಸಿದರು. ಆದರೆ ಟಕಹಾಶಿ 18-14ರಲ್ಲಿ ಮುಂದೆ ಸಾಗಿದರು. ಆದರೂ ಗೇಮ್ ಗೆಲ್ಲುವಲ್ಲಿ ಸಿಂಧು ಯಶಸ್ವಿಯಾದರು.
ನಿರ್ಣಾಯಕ ಮೂರನೇ ಗೇಮ್‌ನ ಆರಂಭದಲ್ಲಿ ಇಬ್ಬರೂ 6–6ರ ಸಮಬಲ ಸಾಧಿಸಿದರು. ನಂತರ ಟಕಹಾಶಿ 11–6ರ ಮುನ್ನಡೆ ಗಳಿಸಿದರು. ಬಲಶಾಲಿ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್‌ಗಳನ್ನು ಗಳಿಸಿದ ಟಕಹಾಶಿ ಅವರು ಗೇಮ್ ಮತ್ತು ಪಂದ್ಯ ಗೆದ್ದು ಪ್ರಶಸ್ತಿ ಸುತ್ತು ಪ್ರವೇಶಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.