ADVERTISEMENT

ಪ್ರಿಕ್ವಾರ್ಟರ್‌ಗೆ ಸಿಂಧು; ಲಕ್ಷ್ಯಗೆ ನಿರಾಸೆ

ಕುಮಾಮೊಟೊ ಮಾಸ್ಟರ್ಸ್ ಜಪಾನ್ ಬ್ಯಾಡ್ಮಿಂಟನ್

ಪಿಟಿಐ
Published 13 ನವೆಂಬರ್ 2024, 16:07 IST
Last Updated 13 ನವೆಂಬರ್ 2024, 16:07 IST
ಭಾರತದ ಪಿ.ವಿ. ಸಿಂಧು 
ಭಾರತದ ಪಿ.ವಿ. ಸಿಂಧು    

ಕುಮಾಮೊಟೊ, ಜಪಾನ್: ಒಲಿಂಪಿಯನ್ ಪಿ.ವಿ. ಸಿಂಧು ಕುಮಾಮೊಟೊ ಮಾಸ್ಟರ್ಸ್ ಜಪಾನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಅವರು ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದರು. 

ವಿಶ್ವ ರ‍್ಯಾಂಕಿಂಗ್‌ನಲ್ಲಿ 20ನೇ ಸ್ಥಾನದಲ್ಲಿರುವ ಸಿಂಧು ಅವರು 21–12, 21–18ರಿಂದ ಥಾಯ್ಲೆಂಡ್‌ನ ಬುಸನನ್ ಒಂಗಬಾಮ್ರುಂಗಪನ್ ವಿರುದ್ಧ ಜಯಿಸಿದರು. ಸಿಂಧು ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಬುಸನನ್ ಅವರನ್ನು 38 ನಿಮಿಷದಲ್ಲಿ ಮಣಿಸಿದರು.  

ಕಳೆದ ಕೆಲವು ಟೂರ್ನಿಗಳಲ್ಲಿ ಸಿಂಧು ಅವರು ಬಹಳಷ್ಟು ವೈಫಲ್ಯ ಅನುಭವಿಸಿದ್ದಾರೆ. ಪ್ರಶಸ್ತಿ ಬರ ಎದುರಿಸುತ್ತಿರುವ ಸಿಂಧು ಅವರು ಇಲ್ಲಿ ಮತ್ತೆ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. ಮುಂದಿನ ಸುತ್ತುಗಳಲ್ಲಿ ಅವರಿಗೆ ಕಠಿಣ ಎದುರಾಳಿಗಳು ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚಿದೆ.

ADVERTISEMENT

ಮುಂದಿನ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಕೆನಡಾದ ಮಿಚೆಲ್ ಲೀ ವಿರುದ್ಧ ಆಡಲಿದ್ದಾರೆ. 

ಪುರುಷರ ವಿಭಾಗದಲ್ಲಿ ಲಕ್ಷ್ಮ್ಯ ಸೇನ್ ಅವರು 22–20, 17–21, 16–21ರಿಂದ ಮಲೇಷ್ಯಾದ ಲಿಯಾಂಗ್ ಜುನ್ ಹಾವೊ ವಿರುದ್ಧ ಸೋಲನುಭವಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ಲಕ್ಷ್ಯ ಅವರು ಇಲ್ಲಿ ಮೊದಲ ಗೇಮ್‌ನಲ್ಲಿ ಪ್ರಯಾಸದ ಜಯ ಸಾಧಿಸಿದರು. ಟೈಬ್ರೇಕರ್‌ನಲ್ಲಿ ಗೆದ್ದರು. ಆದರೆ ನಂತರದ ಎರಡೂ ಗೇಮ್‌ಗಳಲ್ಲಿ  ಮಲೇಷ್ಯಾದ ಆಟಗಾರ ಪಾರಮ್ಯ ಮೆರೆದರು. 

ಮಂಗಳವಾರ ನಡೆದಿದ್ದ ಮಹಿಳೆಯರ ಡಬಲ್ಸ್‌ನಲ್ಲಿ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಮೊದಲ ಸುತ್ತಿನಲ್ಲಿಯೇ ಸೋಲನುಭವಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.