ADVERTISEMENT

ಜಪಾನ್ ಓಪನ್ ಬ್ಯಾಡ್ಮಿಂಟನ್: ಚಿರಾಗ್‌–ಸಾತ್ವಿಕ್ ಜೋಡಿಯ ಮೇಲೆ ಕಣ್ಣು

ಪಿಟಿಐ
Published 24 ಜುಲೈ 2023, 12:19 IST
Last Updated 24 ಜುಲೈ 2023, 12:19 IST
   

ಟೋಕಿಯೊ: ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ  ಮಂಗಳವಾರ ಆರಂಭವಾಗಲಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಭರವಸೆಯಾಗಿದ್ದಾರೆ.

ಕಳೆದ ಮಾರ್ಚ್‌ನಿಂದ ಇಲ್ಲಿಯವರೆಗೆ ಭಾರತದ ಈ ಜೋಡಿಯು ನಾಲ್ಕು ಪ್ರಶಸ್ತಿಗಳನ್ನು ಜಯಿಸಿದೆ. ಭಾನುವಾರ ನಡೆದಿದ್ದ  ಕೊರಿಯಾ ಓಪನ್ ಫೈನಲ್‌ನಲ್ಲಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಫಜರ್ ಅಲ್ಫೈನ್ ಮತ್ತು ಮೊಹಮ್ಮದ್ ರಿಯಾನ್ ಆರ್ಡಿಯಾಂಟೊ ಜೋಡಿಯನ್ನು ಚಿರಾಗ್‌ ಮತ್ತು ಸಾತ್ವಿಕ್ ಮಣಿಸಿದ್ದರು. ಅಲ್ಲದೇ ಭಾರತದ ಜೋಡಿಯು ಕಳೆದ ಹತ್ತು ಪಂದ್ಯಗಳಲ್ಲಿ  ಸತತ ಜಯ ಸಾಧಿಸಿದೆ.

ಜಪಾನ್ ಅಂಕಣದಲ್ಲಿ ಭಾರತದ ಒಲಿಂಪಿಯನ್ ಪಿ.ವಿ. ಸಿಂಧು ಕಣದಲ್ಲಿದ್ದಾರೆ. ಆದರೆ ಅವರು ಬಹಳಷ್ಟು ಸಮಯದಿಂದ ಯಾವುದೇ ಟೂರ್ನಿಯಲ್ಲಿಯೂ ಪ್ರಶಸ್ತಿ ಜಯಿಸಿಲ್ಲ. ಇದರಿಂದಾಗಿ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿಯೂ 17ನೇ ಸ್ಥಾನಕ್ಕೆ ಕುಸಿದಿದ್ದಾರೆ. ಗಾಯದಿಂದ ಚೇತರಿಸಿಕೊಂಡ ನಂತರ ಅವರು ಈ ಹಿನ್ನಡೆಯನ್ನು ಅನುಭವಿಸುತ್ತಿದ್ದಾರೆ.  ಪ್ಯಾರಿಸ್ ಒಲಿಂಪಿಕ್‌ ಕೂಟಕ್ಕೆ ಇನ್ನೊಂದು ವರ್ಷ ಬಾಕಿ ಇದ್ದು, ಸಿಂಧು ಗೆಲುವಿನ ಲಯಕ್ಕೆ ಮರಳುವ ಪ್ರಯತ್ನದಲ್ಲಿದ್ದಾರೆ. 

ADVERTISEMENT

ಕೊರಿಯಾ ಓಪನ್ ಸೇರಿದಂತೆ ಇತ್ತೀಚೆಗಿನ ಕೆಲವು ಟೂರ್ನಿಗಳಲ್ಲಿ ನಿರ್ಣಾಯಕ ಘಟ್ಟಗಳಲ್ಲಿ ಪಾಯಿಂಟ್ ಗಳಿಸುವಲ್ಲಿ ಸಿಂಧು ಎಡವಿದ್ದಾರೆ. ಈ ದೌರ್ಬಲ್ಯದಿಂದ ಅವರು ಹೊರಬಂದರೆ ಮತ್ತೆ ಜಯಗಳಿಸುವುದು ಸುಲಭವಾಗಬಹುದು.

ಪುರುಷರ ವಿಭಾಗದಲ್ಲಿ ಎಚ್‌.ಎಸ್. ಪ್ರಣಯ್ ಕೂಡ ಇಲ್ಲಿ ಕಣಕ್ಕಿಳೀಯುವರು. ಹೋದ ಮೇ ತಿಂಗಳಲ್ಲಿ ವಿಶ್ವ ಟೂರ್ ಪ್ರಶಸ್ತಿ ಜಯಿಸಿದ ನಂತರ ಅವರು ಇನ್ನೂ ಯಾವುದೇ ಟೂರ್ನಿಯಲ್ಲಿ ಗೆದ್ದಿಲ್ಲ. ಕಿದಂಬಿ ಶ್ರೀಕಾಂತ್ ಅವರು ಈ ಟೂರ್ನಿಯಲ್ಲಿ ಆಡಲಿದ್ದು ಮೊದಲ ಪಂದ್ಯದಲ್ಲಿ ಚೈನಿಸ್ ತೈಪೆಯ ಚೌ ಟೀನ್ ಚೆನ್ ಅವರನ್ನು ಎದುರಿಸುವರು.

ಯುವಪ್ರತಿಭೆಗಳಾದ ಲಕ್ಷ್ಯ ಸೇನ್, ಪ್ರಿಯಾಂಶು ರಾಜಾವತ್, ಅಂತೋನಿ ಸಿನಿಸುಖ, ಮಾಳವಿಕಾ ಬನ್ಸೋದ್, ಆಯಾ  ಒಹೊರಿ, ಆಕರ್ಷಿ ಕಶ್ಯಪ್ ಅವರು ಸ್ಪರ್ಧೆಯಲ್ಲಿದ್ದಾರೆ. ಅತಿಥೇಯ ದೇಶದ ಅಕೆನೆ ಯಮಾಗುಚಿ ಮಹಿಳೆಯರ ವಿಭಾಗದ ಪ್ರಮುಖ ಆಕರ್ಷಣೆಯಾಗಿದ್ದಾರೆ. ಡಬಲ್ಸ್‌ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಮತ್ತು ಸ್ಥಳೀಯ ಜೋಡಿ ಸಯಾಕಾ ಹೊಬರಾ ಮತ್ತು ಯೀ ಸೂಯೆಜ್ ಮುಖಾಮುಖಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.