ಸಿಂಗಪುರ : ಭಾರತದ ಕಿದಂಬಿ ಶ್ರೀಕಾಂತ್ ಸಿಂಗಪುರ ಓಪನ್ ಸೂಪರ್ 750 ಟೂರ್ನಿಯಲ್ಲಿ ಮಂಗಳವಾರ ಶುಭಾರಂಭ ಮಾಡಿದರು. ಆದರೆ ಭಾರತದ ಇನ್ನಿಬ್ಬರು– ಪಿ.ವಿ. ಸಿಂಧು ಮತ್ತು ಎಚ್.ಎಸ್. ಪ್ರಣಯ್ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು.
2021ರ ವಿಶ್ವಚಾಂಪಿಯನ್‌ಷಿಪ್‌ನ ಬೆಳ್ಳಿ ವಿಜೇತ ಶ್ರೀಕಾಂತ್ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಕೆಂಟಾಫೊನ್ ವಾಂಗ್ಚರೋನ್ ಅವರನ್ನು 21–15, 21–19 ರಿಂದ ಸೋಲಿಸಿದರು. ಅವರು ಚೀನಾ ತೈಪೆಯ ಚಿಯಾ ಹಾವೊ ಲಿ ಅವರನ್ನು ಎದುರಿಸಲಿದ್ದಾರೆ. ಹಾವೊ ಲಿ ಇನ್ನೊಂದು ಪಂದ್ಯದಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ಅವರನ್ನು ಹಿಮ್ಮೆಟ್ಟಿಸಿದರು.
ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಕಾನೆ ಯಮಗುಚಿ ಎದುರು ಮೊದಲ ಸುತ್ತಿನಲ್ಲಿ ಆಡಿದ ಸಿಂಧು ಸುಮಾರು ಒಂದು ಗಂಟೆಯ ಪಂದ್ಯದಲ್ಲಿ ಸೋಲುವ ಮೊದಲು ಹೋರಾಟ ತೋರಿದರು. ಕಳೆದ ಬಾರಿ ಈ ಟೂರ್ನಿಯಲ್ಲಿ ವಿಜೇತರಾಗಿದ್ದ ಸಿಂಧು 21–18, 19–21, 17–21 ರಲ್ಲಿ ಮಣಿದರು.
ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಇಲ್ಲಿಗೆ ಬಂದಿದ್ದ ಪ್ರಣಯ್, ಜಪಾನ್‌ನ ಯುವ ಆಟಗಾರ ಹಾಗೂ ಮೂರನೇ ಶ್ರೇಯಾಂಕದ ಕೊಡಾಯಿ ನರವೊಕಾ ಅವರಿಗೆ ಸಾಟಿಯಾಗಲಿಲ್ಲ. ನರವೊಕಾ 21–15, 21–19 ರಿಂದ ಗೆಲ್ಲಲು 56 ನಿಮಿಷ ತೆಗೆದುಕೊಂಡರು.
ಸೈನಾ ಮತ್ತು ಆಕರ್ಷಿ ಕಶ್ಯಪ್ ಕೂಡ ಮೊದಲ ಸುತ್ತನ್ನು ದಾಟಲು ವಿಫಲರಾದರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ 13–21, 15–21 ರಲ್ಲಿ ಮಾಜಿ ವಿಶ್ವ ಚಾಂಪಿಯನ್ ರಟ್ಚಾನೊಕ್ ಇಂಟಾನೊನ್ (ಥಾಯ್ಲೆಂಡ್) ಅವರೆದುರು ಪರಾಭವ ಕಂಡರು. ಥಾಯ್ಲೆಂಡ್‌ನ ಇನ್ನೋರ್ವ ಆಟಗಾರ್ತಿ ಸುಪನಿದಾ ಕಟೆಥಾಂಗ್ 21–17, 21–9 ರಿಂದ ಆಕರ್ಷಿ ಅವರನ್ನು ಸೋಲಿಸಿದರು.
ಮುನ್ನಡೆ:
ಭಾರತದ ಪುರುಷರ ಡಬಲ್ಸ್ ಜೋಡಿ ಎಂ.ಆರ್.ಅರ್ಜುನ್– ಧ್ರುವ ಕಪಿಲ್ ಅವರು ಮೊದಲ ಸುತ್ತಿನಲ್ಲಿ 21–16, 21–15 ರಿಂದ ಫ್ರಾನ್ಸ್‌ನ ಲುಕಾಸ್ ಕೊರ್ವಿ ಮತ್ತು ರೊನಾನ್ ಲಬರ್ ಅವರನ್ನು ಸೋಲಿಸಿ ಉತ್ತಮ ಆರಂಭ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.