ಕ್ವಾಲಾಲಂಪುರ: ವಿರಾಮದ ನಂತರ ಪುನರಾಗಮನ ಮಾಡಿರುವ ಐದನೇ ಶ್ರೇಯಾಂಕದ ಪಿ.ವಿ. ಸಿಂಧು, ಮಲೇಷ್ಯಾ ಓಪನ್ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್‌ನಲ್ಲಿ ಸ್ಕಾಟ್ಲೆಂಡ್‌ನ ಕಿರ್ಟ್ಸಿ ಗಿಲ್ಮರ್ ಅವರನ್ನು ನೇರ ಆಟಗಳಿಂದ ಸೋಲಿಸಿ ಎರಡನೇ ಸುತ್ತನ್ನು ತಲುಪಿದರು.
ವಿಶ್ವ ಕ್ರಮಾಂಕದಲ್ಲಿ 15ನೇ ಸ್ಥಾನದಲ್ಲಿರುವ ಸಿಂಧು ಅವರಿಗೆ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯವನ್ನು 21–17, 21–16 ರಲ್ಲಿ ಗೆದ್ದುಕೊಳ್ಳಲು ಮುಕ್ಕಾಲು ಗಂಟೆ ಬೇಕಾಯಿತು. ಕಿರ್ಟ್ಸಿ ಅವರು ವಿಶ್ವ ಕ್ರಮಾಂಕದಲ್ಲಿ 22ನೇ ಸ್ಥಾನದಲ್ಲಿದ್ದಾರೆ.
2022ರಲ್ಲಿ ಸಿಂಗಪುರ ಓಪನ್ ಗೆದ್ದ ನಂತರ ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಭಾರತದ 28 ವರ್ಷದ ಆಟಗಾರ್ತಿ, ಮುಂದಿನ ಸುತ್ತಿನಲ್ಲಿ ಕೊರಿಯಾದ ಸಿಮ್ ಯು ಜಿನ್ ಅವರನ್ನು ಎದುರಿಸಲಿದ್ದಾರೆ.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಬಿ.ಸುಮೀತ್ ರೆಡ್ಡಿ ಮತ್ತು ಎನ್.ಸಿಕ್ಕಿ ರೆಡ್ಡಿ ಅವರೂ ಎರಡನೇ ಸುತ್ತಿಗೆ ಮುನ್ನಡೆದರು. 53ನೇ ಕ್ರಮಾಂಕದ ಈ ದಂಪತಿ ಜೋಡಿ 21–15, 21–12, 21–17 ರಿಂದ ಕ್ವಾಲಿಫೈಯರ್‌ಗಳಾದ ಹಾಂಕ್ ಕಾಂಗ್‌ನ ಲುಯಿ ಚುನ್ ವಾಯ್ – ಫು ಚಿ ಯಾನ್ ಅವರನ್ನು ಮಣಿಸಲು 47 ನಿಮಿಷ ತೆಗೆದುಕೊಂಡಿತು. ವಿಜೇತ ತಂಡ ಮುಂದಿನ ಸುತ್ತಿನಲ್ಲಿ ಆತಿಥೇಯ ಮಲೇಷ್ಯಾದ ಚೆನ್ ತಾಂಗ್ ಜೀ – ತೊಹ್ ಈ ವೀ ಜೋಡಿಯನ್ನು ಎದುರಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.