ADVERTISEMENT

ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಟ್ರಿಸಾ–ಗಾಯತ್ರಿ ಜೋಡಿಗೆ ನಿರಾಸೆ

ಭಾರತದ ಸವಾಲು ಅಂತ್ಯ

ಪಿಟಿಐ
Published 1 ಜೂನ್ 2024, 16:06 IST
Last Updated 1 ಜೂನ್ 2024, 16:06 IST
ಗಾಯತ್ರಿ ಗೋಪಿಚಂದ್‌ ಮತ್ತು ಟ್ರಿಸಾ ಜೋಳಿ
ಗಾಯತ್ರಿ ಗೋಪಿಚಂದ್‌ ಮತ್ತು ಟ್ರಿಸಾ ಜೋಳಿ   

ಸಿಂಗಪುರ: ಭಾರತದ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಅವರು ಶನಿವಾರ ಸಿಂಗಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಡಬಲ್ಸ್‌ನ ಸೆಮಿಫೈನಲ್‌ನಲ್ಲಿ ವಿಶ್ವದ 4ನೇ ಕ್ರಮಾಂಕದ ಜಪಾನ್‌ನ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ಜೋಡಿ ಎದುರು ನೇರ್‌ ಗೇಮ್‌ಗಳಿಂದ ಸೋತರು. ಇದರೊಂದಿಗೆ ಈ ಟೂರ್ನಿಯಲ್ಲಿ ಭಾರತದ ಸವಾಲು ಕೊನೆಗೊಂಡಿತು.

ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿದ ಶ್ರೇಯಾಂಕರಹಿತ ಭಾರತದ ಜೋಡಿಗೆ ನಿರಾಸೆ ಉಂಟಾಯಿತು. 47 ನಿಮಿಷಗಳ ಸೆಣಸಾಟದಲ್ಲಿ ಜಪಾನ್ ಜೋಡಿ 23-21, 21-11 ರಲ್ಲಿ ಭಾರತ ಜೋಡಿಗೆ ಆಘಾತ ನೀಡಿತು. 

ಫೆಬ್ರವರಿಯಲ್ಲಿ ನಡೆದ ಏಷ್ಯಾ ಟೀಮ್ ಚಾಂಪಿಯನ್‌ಷಿಪ್‌ನಲ್ಲಿ ಟ್ರಿಸಾ-ಗಾಯತ್ರಿ ವಿರುದ್ಧ ಸೆಮಿಫೈನಲ್ ಸೋಲಿಗೆ ಜಪಾನ್ ಜೋಡಿ ಇಲ್ಲಿ ಮುಯ್ಯಿ ತೀರಿಸಿಕೊಂಡಿತು. ಮುಖಾಮುಖಿ ಪಂದ್ಯದಲ್ಲಿ ಭಾರತ ಜೋಡಿ ವಿರುದ್ಧ ಜಪಾನ್ 3-1 ಮುನ್ನಡೆ ಸಾಧಿಸಿದೆ.

ADVERTISEMENT

ಕಾಮನ್‌ವೆಲ್ತ್ ಗೇಮ್ಸ್ ಕಂಚಿನ ಪದಕ ವಿಜೇತರಾದ ಟ್ರಿಸಾ ಮತ್ತು ಗಾಯತ್ರಿ ಮೊದಲ ಗೇಮ್‌ನಲ್ಲಿ 5-10 ರಿಂದ ಹಿನ್ನಡೆ ಅನುಭವಿಸಿ, ಬಳಿಕ ಚೇತರಿಸಿಕೊಂಡು 16-16 ರಲ್ಲಿ ಮುನ್ನಡೆ ಸಾಧಿಸಿದರು. ಆದರೆ, ಮತ್ಸುಯಾಮಾ ಮತ್ತು ಶಿಡಾ ಪ್ರಾಬಲ್ಯ ಮುಂದುವರಿಸಿ ಮೊದಲ ಗೇಮ್‌ ಗೆದ್ದರು. ಎರಡನೇ ಗೇಮ್‌ನಲ್ಲಿ ಜಪಾನಿಯರು 20-6 ರಿಂದ ಮುನ್ನಡೆ ಸಾಧಿಸಿ, ಎದುರಾಳಿಗೆ ಪುಟಿದೇಳಲು ಅವಕಾಶ ನೀಡಲಿಲ್ಲ.  

ಭಾರತದ ಜೋಡಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ ಎರಡನೇ ಸ್ಥಾನದ ಕೊರಿಯಾದ ಬೇಕ್ ಹಾ ನಾ ಮತ್ತು ಲೀ ಸೋ ಹೀ ಹಾಗೂ ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ದಕ್ಷಿಣ ಕೊರಿಯಾದ ಕಿಮ್ ಸೋ ಯೊಂಗ್ ಮತ್ತು ಕಾಂಗ್ ಹೀ ಯಾಂಗ್‌ ಜೋಡಿಯನ್ನು ಸೋಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.