ಸೇಂಟ್ ಲೂಯಿ (ಅಮೆರಿಕ): ಪ್ರಜ್ಞಾನಂದ ರಮೇಶಬಾಬು ವಿರುದ್ಧ ಬುಧವಾರ ಕೊನೆಯ (ಒಂಬತ್ತನೇ) ಸುತ್ತಿನ ಪಂದ್ಯವನ್ನು 47 ನಡೆಗಳಲ್ಲಿ ‘ಡ್ರಾ’ ಮಾಡಿಕೊಂಡ ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಸಿಂಕ್ವೆಫೀಲ್ಡ್ ಕಪ್ ಚೆಸ್ ಟೂರ್ನಿಯಲ್ಲಿ ನಿರೀಕ್ಷೆಯಂತೆ ಪ್ರಶಸ್ತಿ ಗೆದ್ದುಕೊಂಡರು.
ಇರಾನ್‌ನಲ್ಲಿ ಜನಿಸಿ ಫ್ರಾನ್ಸ್‌ನಲ್ಲಿ ನೆಲೆಸಿರುವ ಫಿರೋಜ್, ಒಂದು ಸುತ್ತು ಮೊದಲೇ ಗ್ರ್ಯಾಂಡ್ ಚೆಸ್ ಟೂರ್ ಟ್ರೋಫಿಯನ್ನೂ ಖಚಿತಪಡಿಸಿಕೊಂಡಿದ್ದರು. ಗ್ರ್ಯಾಂಡ್ ಚೆಸ್ ಟೂರ್, ಐದು ಟೂರ್ನಿಗಳ ಸರಣಿಯಾಗಿದ್ದು, ಇದರಲ್ಲಿ ಸಿಂಕ್ವೆಫೀಲ್ಡ್ ಕಪ್ ಒಳಗೊಂಡಿದೆ.
ಎರಡು ವರ್ಷಗಳ ಹಿಂದೆ ಕೂಡ ಅಲಿರೇಜಾ ಅವರು ಗ್ರ್ಯಾಂಡ್ ಚೆಸ್ ಟೂರ್ ಗೆದ್ದುಕೊಂಡಿದ್ದರು. ಆ ಬಾರಿ ಅವರು ಸೇಂಟ್ ಲೂಯಿ ಟೂರ್ನಿಯಲ್ಲೂ ವಿಜೇತರಾಗಿದ್ದರು. ಎರಡೂ ಬಾರಿ ಟೂರ್ ಟ್ರೋಫಿ ಗೆಲ್ಲುವ ಮೊದಲು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಅವರು ನಿರಾಶಾದಾಯಕ ಪ್ರದರ್ಶನದಿಂದ ಪುಟಿದೆದ್ದಿದ್ದರು.
ಅಲಿರೇಜಾ ಆರು ಪಾಯಿಂಟ್ಸ್ ಸಂಗ್ರಹಿಸಿದರೆ, ಅರ್ಧ ಪಾಯಿಂಟ್ ಅಂತರದಿಂದ ಹಿಂದೆಬಿದ್ದ ಅಮೆರಿಕದ ಫ್ಯಾಬಿಯಾನೊ ಕರುವಾನ (5.5) ಎರಡನೇ ಸ್ಥಾನ ಗಳಿಸಿದರು. ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಮತ್ತು ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ತಲಾ ಐದು ಪಾಯಿಂಟ್ಸ್ ಕಲೆಹಾಕಿ ಮೂರನೇ ಸ್ಥಾನ ಹಂಚಿಕೊಂಡರು.
ಗುಕೇಶ್ ದೊಮ್ಮರಾಜು, ಪ್ರಜ್ಞಾನಂದ ಮತ್ತು ಅಮೆರಿಕದ ವೆಸ್ಲಿ ಸೊ (ತಲಾ 4.5) ನಾಲ್ಕನೇ ಸ್ಥಾನ ಹಂಚಿಕೊಂಡರು. ಗುಕೇಶ್ ಮತ್ತು ಪ್ರಜ್ಞಾನಂದ ಆಡಿದ 9 ಸುತ್ತುಗಳಲ್ಲೂ ಎಲ್ಲ ಡ್ರಾ ಮಾಡಿಕೊಂಡರು.
ಇಯಾನ್ ನಿಪೊಮ್‌ನಿಷಿ ಮತ್ತು ಡಿಂಗ್ ಲಿರೆನ್ (ತಲಾ 3.5) ನಂತರದ ಸ್ಥಾನ ಪಡೆದರೆ, ನೆದರ್ಲೆಂಡ್ಸ್‌ನ ಅನಿಶ್ ಗಿರಿ (3) ಕೊನೆಯ ಸ್ಥಾನ ಪಡೆದರು.
ಒಂಬತ್ತನೇ ಸುತ್ತಿನಲ್ಲಿ ಮೂರು ನಿರ್ಣಾಯಕ ಫಲಿತಾಂಶಗಳು ದಾಖಲಾದವು. ಕರುವಾನ, ಅನೀಶ್ ಗಿರಿ ವಿರುದ್ಧ ಜಯಗಳಿಸಿದರೆ, ವೇಷಿಯರ್ ಲಗ್ರಾವ್, ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಅವರಿಗೆ ಸೋಲುಣಿಸಿದರು. ನಾಡಿರ್ಬೆಕ್ ಅಬ್ದುಸತ್ತಾರೋವ್, ರಷ್ಯಾದ ಇಯಾನ್ ನಿಪೊಮ್‌ನಿಷಿ ಅವರನ್ನು ಪರಾಭವಗೊಳಿಸಿದರು. ಗುಕೇಶ್ ಮತ್ತು ವೆಸ್ಲಿ ‘ಡ್ರಾ’ಕ್ಕೆ ಸಹಿಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.