ಸೇಂಟ್ ಲೂಯಿ (ಅಮೆರಿಕ): ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ಯೋಜನಾಬದ್ಧವಾಗಿ ಆಡಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ಆರ್. ಅವರು ಸಿಂಕ್ವೆಫೀಲ್ಡ್ ಚೆಸ್ ಚಾಂಪಿಯನ್‌ಷಿಪ್‌ನ ಆರನೇ ಸುತ್ತಿನ ಪಂದ್ಯವನ್ನು ಭಾನುವಾರ ಸುಲಭವಾಗಿ ‘ಡ್ರಾ’ ಮಾಡಿಕೊಂಡರು.
ಗ್ರ್ಯಾಂಡ್ ಚೆಸ್ ಟೂರ್‌ನ ಅಂತಿಮ ಲೆಗ್ ಆಗಿರುವ ಈ ಟೂರ್ನಿಯಲ್ಲಿ ಪಾಲ್ಗೊಂಡಿರುವ ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್, ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ 72 ನಡೆಗಳ ನಂತರ ಡ್ರಾ ಮಾಡಿಕೊಂಡರು.
ಆದರೆ, ದಿನದ ಅನಿರೀಕ್ಷಿತ ಫಲಿತಾಂಶದಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರು ಈ ಟೂರ್ನಿಯಲ್ಲಿ ಉತ್ತಮ ಲಯದಲ್ಲಿದ್ದ ಇಯಾನ್ ನಿಪೊಮ್‌ನಿಯಾಷಿ (ರಷ್ಯಾ) ಅವರನ್ನು ಮಣಿಸಿದರು. ಅದೂ ಕೇವಲ 25 ನಡೆಗಳಲ್ಲಿ. ಭಾನುವಾರ ಇದೊಂದೇ ಪಂದ್ಯ ನಿರ್ಣಾಯಕ ಫಲಿತಾಂಶ ಕಂಡಿತು. ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು.
ಹಾಲೆಂಡ್‌ನ ಅನಿಶ್ ಗಿರಿ ಮತ್ತು ಉಜ್ಬೇಕಿಸ್ತಾನದ ನಾಡಿರ್ಬೆಕ್ ಅಬ್ದುಸತ್ತಾರೋವ್ ನಡುವಣ ಪಂದ್ಯ ಡ್ರಾ ಆದರೆ, ಫ್ರಾನ್ಸ್‌ನ ಅಲಿರೇಜಾ ಫಿರೋಜ್ ಮತ್ತು ಸ್ಥಳೀಯ ತಾರೆ ವೆಸ್ಲಿ ಸೊ ಕೂಡ ಪಾಯಿಂಟ್ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದರು.
ಇನ್ನು ಮೂರು ಸುತ್ತುಗಳು ಉಳಿದಿದ್ದು, ಕರುವಾನ ಅವರು ಅಲಿರೇಜಾ ಫಿರೋಜ್ ಅವರಿಗೆ ಪ್ರಬಲ ಪೈಪೋಟಿ ನೀಡುವಂತೆ ಕಾಣುತ್ತಿದೆ. ಆದರೆ ಅಲಿರೇಜಾ ನಾಲ್ಕು ಪಾಯಿಂಟ್ಸ್ ಗಳಿಸಿದ್ದು ಮುನ್ನಡೆ ಉಳಿಸಿಕೊಂಡಿದ್ದಾರೆ. ಕರುವಾನ ಮತ್ತು ವೆಸ್ಲಿ ಸೊ ತಲಾ 3.5 ಪಾಯಿಂಟ್ಸ್ ಕಲೆಹಾಕಿದ್ದು ಅರ್ಧ ಪಾಯಿಂಟ್ ಅಂತರದಿಂದ ಎರಡನೇ ಸ್ಥಾನದಲ್ಲಿದ್ದಾರೆ.
ಪ್ರಜ್ಞಾನಂದ, ಗುಕೇಶ್, ವೇಷಿಯರ್–ಲಗ್ರಾವ್ ಮತ್ತು ಲಿರೆನ್ ಅವರು ತಲಾ ಮೂರು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ನಿಪೊಮ್‌ನಿಯಾಷಿ ಮತ್ತು ಅಬ್ದುಸತ್ತಾರೋವ್ ಅವರು (2.5) ನಂತರದ ಸ್ಥಾನದಲ್ಲಿದ್ದಾರೆ. ಡಚ್ ಆಟಗಾರ ಅನಿಶ್ ಗಿರಿ (2) ಹತ್ತು ಆಟಗಾರರ ಪಟ್ಟಿಯಲ್ಲಿ ತಳದಲ್ಲಿದ್ದಾರೆ.
ಲಗ್ರಾವ್ ವಿರುದ್ಧ ಗುಕೇಶ್ ಗೆಲುವಿಗೆ ಸಾಧ್ಯವಾದ ಎಲ್ಲ ಪ್ರಯತ್ನ ನಡೆಸಿದರು. ಆದರೆ ಅವರಿಗೆ ಸ್ಪಷ್ಟ ಮೇಲುಗೈ ಸಿಗಲಿಲ್ಲ.
ಇನ್ನೊಂದೆಡೆ, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಲಿರೆನ್ ಎದುರು ಪ್ರಜ್ಞಾನಂದ ಹೆಚ್ಚಿನ ಸಾಹಸಕ್ಕೆ ಹೋಗಲಿಲ್ಲ. ನವೆಂಬರ್ ತಿಂಗಳಲ್ಲಿ ನಡೆಯುವ ಈ ಬಾರಿಯ ವಿಶ್ವ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಗುಕೇಶ್ ಎದುರು ಆಡಲಿರುವ ಲಿರೆನ್ ಕೂಡ ರಿಸ್ಕ್ ತೆಗೆದುಕೊಳ್ಳಲು ಮುಂದಾಗಲಿಲ್ಲ. ಹೀಗಾಗಿ ಪಂದ್ಯ ‘ಡ್ರಾ’ ಹಾದಿ ಹಿಡಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.