ADVERTISEMENT

ಕರಾಟೆಯಲ್ಲಿ ಈ ಸಹೋದರಿಯರಿಗೆ ಸರಿಸಾಟಿಯಿಲ್ಲ

ಎಂ.ಬಸವರಾಜಯ್ಯ
Published 30 ಏಪ್ರಿಲ್ 2019, 19:30 IST
Last Updated 30 ಏಪ್ರಿಲ್ 2019, 19:30 IST
ಕರಾಟೆ ಕಲಿಕೆಯಲ್ಲಿ ನಿರತರಾಗಿರುವ ಎಚ್.ಎಂ.ಅಕ್ಷತಾ (ಎಡಬದಿ) ಹಾಗೂ ಎಚ್.ಎಂ.ಅಮೃತಾ
ಕರಾಟೆ ಕಲಿಕೆಯಲ್ಲಿ ನಿರತರಾಗಿರುವ ಎಚ್.ಎಂ.ಅಕ್ಷತಾ (ಎಡಬದಿ) ಹಾಗೂ ಎಚ್.ಎಂ.ಅಮೃತಾ   

ಸಿರುಗುಪ್ಪ: ಕಿರಿಯ ವಯಸ್ಸಿನಲ್ಲಿಯೇ ಸಹೋದರಿಯರಿಬ್ಬರು ಕರಾಟೆಯಲ್ಲಿ ಅದ್ವಿತೀಯ ಸಾಧನೆ ಮಾಡಿ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ.

ನಗರದ ಕರಾಟೆ ಜಿಲ್ಲಾ ಶಿಕ್ಷಕ ಮಲ್ಲಿಕಾರ್ಜುನ ಹಿರೇಮಠ ಅವರ ಮಕ್ಕಳಾದ ಎಚ್.ಎಂ.ಅಕ್ಷತಾ, ಎಚ್.ಎಂ.ಅಮೃತಾ ಕರಾಟೆಯಲ್ಲಿ ಸಾಧನೆ ಮಾಡಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ತಂದೆಯಿಂದ ಪ್ರೇರಣೆಗೊಂಡುಅವರ ಬಳಿಯೇ ಕರಾಟೆ ಕಲಿತ ಈ ಇಬ್ಬರೂ ಸಹೋದರಿಯರು 2006ರಲ್ಲಿ ಮೈಸೂರಿನ ದಸರಾ ಉತ್ಸವದಲ್ಲಿ ಮೊದಲ ಬಾರಿ ಕುತ್ತಿಗೆಯ ಮೇಲೆ ಮತ್ತು ಹೊಟ್ಟೆಯ ಮೇಲೆ ಕಲ್ಲು ಒಡೆಯುವ ಪ್ರದರ್ಶನ ನೀಡಿ ಗಮನಾರ್ಹ ಸಾಧನೆ ಮಾಡಿದರು. ಅನಂತರ ಹಿಂತಿರುಗಿ ನೋಡಲೇ ಇಲ್ಲ.

ADVERTISEMENT

2007ರಲ್ಲಿ ಚಿಕ್ಕಮಗಳೂರು, ಬೆಂಗಳೂರು, 2008ರಲ್ಲಿ ದಾವಣಗೆರೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಅಕ್ಷತಾ, ಅಮೃತಾ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಜಯಿಸಿದ್ದಾರೆ.2009 ರಲ್ಲಿ ಮೈಸೂರಿನ ಖ್ಯಾತ ಗ್ರ್ಯಾಂಡ್ ಮಾಸ್ಟರ್ ಸತೀಶ್‍ರಾಜು ಬಳಿ ವೈಟ್ ಬೆಲ್ಟ್ ನಿಂದ ಬ್ರೌನ್ ಬೆಲ್ಟ್‌ ವರೆಗೆ ಅಭ್ಯಾಸ ಮಾಡಿದ್ದಾರೆ.ನಂತರ ತಂದೆ ಮಲ್ಲಿಕಾರ್ಜುನ ಗರಡಿಯಲ್ಲಿ ಪಳಗಿ, ಬೇರೆ ಬೇರೆ ರಾಜ್ಯಗಳ ಕರಾಟೆ ಮಾಸ್ಟರ್‌ ಬಳಿ ತರಬೇತಿ ಪಡೆದುಕೊಂಡಿದ್ದಾರೆ.

ನಗರದ ಎಸ್‍.ಇ.ಎಸ್. ಪ್ರೌಢಶಾಲೆಯಲ್ಲಿ ಎಸ್‍.ಎಸ್‍.ಎಲ್‍.ಸಿ. ಪರೀಕ್ಷೆ ಬರೆದಿರುವ ಅಕ್ಷತಾ ಮತ್ತು ಈ ಬಾರಿ ಎಸ್‍.ಎಸ್‍.ಎಲ್‍.ಸಿ.ಯಲ್ಲಿ ಓದುತ್ತಿರುವ ಅಮೃತಾ ಶಾಲೆಯಲ್ಲಿ ಆಯೋಜಿಸುವ ವಿವಿಧ ಸ್ಪರ್ಧೆಗಳಲ್ಲಿ ಹೆಚ್ಚಿನ ಪ್ರಶಸ್ತಿ ಬಾಚಿಕೊಳ್ಳುತ್ತಾರೆ.

2013ರಲ್ಲಿ ರಾಷ್ಟ್ರೀಯ ಡ್ರ್ಯಾಗನ್‌ ಆರ್ಟ್ಸ್‌ ಅಕಾಡೆಮಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ಸಹೋದರಿಯರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

2014, 2015 ಮತ್ತು 2016ರಲ್ಲಿ ತುಮಕೂರು, ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಗೆದ್ದಿದ್ದಾರೆ.

‘ಜಪಾನಿನ ಗ್ರ್ಯಾಂಡ್‌ ಮಾಸ್ಟರ್ ಯೋಜೊ ಇಕೊದ ಶುಟೊಕಾನ ಸ್ಟೈಲ್ ಮಾಸ್ಟರ್ ಬಳಿ ಕರಾಟೆಯ ಬ್ಲ್ಯಾಕ್‌ ಬೆಲ್ಟ್ ಕಲಿಯುವ ಮಹದಾಸೆ ಇದೆ’ ಎನ್ನುತ್ತಾರೆ ಸಹೋದರಿಯರು.

‘ಮಹಿಳೆಯರು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ಒಳ್ಳೆಯದು’ ಎನ್ನುತ್ತಾರೆ ಬಾಲಕಿಯರ ತಂದೆ ಮಲ್ಲಿಕಾರ್ಜುನ ಹಿರೇಮಠ.

ಅಕ್ಷತಾಗೆ ಐ.ಎ.ಎಸ್. ಆಗುವ ಹಂಬಲವಿದ್ದರೆ, ಅಮೃತಾಗೆ ಕ್ರಿಮಿನಲ್ ಲಾಯರ್ ಆಗುವ ಬಯಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.