ನವದೆಹಲಿ: ಯುವ ಸ್ಕೀಟ್ ಶೂಟರ್ ಭವತೇಗ್ ಸಿಂಗ್ ಗಿಲ್ ಅವರು ಇಲ್ಲಿ ನಡೆಯುತ್ತಿರುವ ವಿಶ್ವ ಯುನಿರ್ವಸಿಟಿ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದರು. ಈ ಮೂಲಕ ಭಾರತದ ಖಾತೆಗೆ ಎರಡನೇ ಚಿನ್ನವನ್ನು ಸೇರಿಸಿದರು.
ಮಂಗಳವಾರ ಭಾರತದ ಶೂಟರ್‌ಗಳು ವೈಯಕ್ತಿಕ ವಿಭಾಗದಲ್ಲಿ ಮೂರು ಕಂಚಿನ ಪದಕ ಗೆದ್ದರು. ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್‌ನಲ್ಲಿ ಸಿಮ್ರಾನ್‌ಪ್ರೀತ್ ಕೌರ್ ಬ್ರಾರ್, ಮಹಿಳೆಯರ ಸ್ಕೀಟ್‌ನಲ್ಲಿ ಯಶಸ್ವಿ ರಾಥೋಡ್ ಮತ್ತು ಪುರುಷರ ಸ್ಕೀಟ್‌ನಲ್ಲಿ ಅಭಯ್ ಸಿಂಗ್ ಸೆಖೋನ್ ಕಂಚು ಜಯಿಸಿದರು.
ಜೂನಿಯರ್ ವಿಭಾಗದಲ್ಲಿ ನಾಲ್ಕು ಅಂತರರಾಷ್ಟ್ರೀಯ ಪದಕಗಳನ್ನು ಗೆದ್ದಿರುವ 21 ವರ್ಷ ವಯಸ್ಸಿನ ಗಿಲ್ ಪುರುಷರ ಸ್ಕೀಟ್ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದರು. ಅವರು ಸೈಪ್ರಸ್‌ನ ಪೆಟ್ರೋಸ್ ಎಂಗಲ್ಜೌಡಿಸ್ ಅವರ ಪ್ರಬಲ ಸವಾಲನ್ನು ಮೆಟ್ಟಿ ನಿಂತು ಚಾಂಪಿಯನ್ ಆದರು. ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಸೆಖೋನ್ ಕಂಚು ಜಯಿಸಿದರು.
ಮಹಿಳೆಯರ ಸ್ಕೀಟ್‌ನಲ್ಲಿ ಇಟಲಿಯ ಗಿಯಾಡಾ ಲಾಂಗಿ ಚಿನ್ನ ಗೆದ್ದರೆ, ಸ್ಲೋವಾಕಿಯಾದ ಅಡೆಲಾ ಸುಪೆಕೋವಾ ಬೆಳ್ಳಿ ಜಯಿಸಿದರು. ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ಯಶಸ್ವಿ ಕಂಚು ಗೆದ್ದರು.
ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಗಳಿಸಿದ್ದ ಸಿಮ್ರಾನ್ ಫೈನಲ್‌ನಲ್ಲೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕೊರಿಯಾದ ಕಿಮ್ ಮಿನೆಸೊ ಮತ್ತು ಫ್ರಾನ್ಸ್‌ನ ಫೋರ್ ಹೆಲೋಯಿಸ್ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಜಯಿಸಿದರು.
ಪಲಕ್ ಗುಲಿಯಾ ಮತ್ತು ಅಮಿತ್ ಶರ್ಮಾ ಅವರನ್ನು ಒಳಗೊಂಡ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಭಾನುವಾರ ಭಾರತದ ಖಾತೆಗೆ ಮೊದಲ ಚಿನ್ನ ಸೇರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.