ADVERTISEMENT

ಸ್ನೂಕರ್: ದಾಖಲೆ ವೇಗದಲ್ಲಿ ಪಂದ್ಯ ಗೆದ್ದ ಸಲಿವಾನ್

ರಾಯಿಟರ್ಸ್
Published 3 ಆಗಸ್ಟ್ 2020, 18:47 IST
Last Updated 3 ಆಗಸ್ಟ್ 2020, 18:47 IST
ರಾನಿ ಓ ಸಲಿವಾನ್–ಎಎಫ್‌ಪಿ ಚಿತ್ರ
ರಾನಿ ಓ ಸಲಿವಾನ್–ಎಎಫ್‌ಪಿ ಚಿತ್ರ   

ಬೆಂಗಳೂರು: ಐದು ಬಾರಿಯ ಚಾಂಪಿಯನ್ ರಾನಿ ಓ ಸಲಿವಾನ್ ಈ ವರ್ಷವೂ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಆರಂಭ ಕಂಡಿದ್ದಾರೆ. ಮೊದಲ ಸುತ್ತಿನಲ್ಲಿ ಥಾಯ್ಲೆಂಡ್‌ನ ಎದುರಾಳಿಯನ್ನು ಮಣಿಸಿದ ಅವರು ಅತಿ ವೇಗದ ಗೆಲುವು ಸಾಧಿಸಿದ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.

ಇಂಗ್ಲೆಂಡ್‌ನ ದಕ್ಷಿಣ ಯಾರ್ಕ್‌ಶೈರ್‌ನ ಕ್ರೂಸಿಬಲ್ ಥಿಯೇಟರ್‌ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಥೆಪ್ಚಯ್ಯ ಉನ್‌–ನೂಹ್ ವಿರುದ್ಧ ಸಲಿವಾನ್ 10–1 ಗೆಲುವು ಸಾಧಿಸಿದರು. 108 ನಿಮಿಷದಲ್ಲಿ ಈ ಹಣಾಹಣಿ ಮುಕ್ತಾಯಗೊಂಡಿತ್ತು. ಇದು, ಈ ಅಂಗಣದಲ್ಲಿ ಅತ್ಯಂತ ವೇಗದಲ್ಲಿ ಮುಕ್ತಾಯ ಕಂಡ ಪಂದ್ಯವಾಗಿದೆ. ಕಳೆದ ವರ್ಷ ಇಂಗ್ಲೆಂಡ್‌ನ ಶಾನ್ ಮರ್ಫಿ 149 ನಿಮಿಷಗಳಲ್ಲಿ ಗೆಲುವು ಸಾಧಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು. ಮೊದಲ ಸುತ್ತಿನಲ್ಲಿ ಅವರು ಚೀನಾದ ಲುವೊ ಹಾಂಗೊ ಅವರನ್ನು 10–0ಯಿಂದ ಮಣಿಸಿದ್ದರು.

‘ದಿ ರಾಕೆಟ್’ ಎಂದೇ ಕರೆಯಲಾಗುವ ಸಲಿವಾನ್ 8–1ರ ಮುನ್ನಡೆ ಸಾಧಿಸಿದ್ದರು. ಈ ಸಂದರ್ಭದಲ್ಲಿ ಎರಡು ತಾಸಿನ ಒಳಗೆ ಪಂದ್ಯ ಗೆದ್ದು ದಾಖಲೆ ಮುರಿಯಲು 30 ನಿಮಿಷಗಳ ಒಳಗೆ ಎರಡು ಫ್ರೇಮ್‌ಗಳಲ್ಲಿ ಗೆಲುವು ಸಾಧಿಸುವ ಸವಾಲು ಎದುರಾಗಿತ್ತು. ಅದನ್ನು ಇಂಗ್ಲೆಂಡ್‌ನ ಈ ಆಟಗಾರ ಸುಲಭವಾಗಿ ದಾಟಿದರು. ಎರಡನೇ ಸುತ್ತಿನಲ್ಲಿ ಅವರು ಚೀನಾದ ದಿಂಗ್ ಜುನುಹಿ ವಿರುದ್ಧ ಸೆಣಸುವರು.

ADVERTISEMENT

ಕೋವಿಡ್–19ಕ್ಕೆ ಹೆದರಿ ಪ್ರೇಕ್ಷಕರನ್ನು ಒಳಗೆ ಬಿಡದೇ ಇರುವುದರನ್ನು ವಿರೋಧಿಸಿ ಆಟಗಾರರನ್ನು ಪ್ರಯೋಗಾಲಯದ ಇಲಿಗಳಂತೆ ಬಳಸಲಾಗುತ್ತಿದೆ ಎಂದು ಹೇಳುವ ಮೂಲಕ ಚಾಂಪಿಯನ್‌ಷಿಪ್‌ಗೂ ಮೊದಲು ಸಲಿವಾನ್ ವಿವಾದ ಸೃಷ್ಟಿಸಿದ್ದರು.

‘ದಾಖಲೆಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ದಾಖಲೆಗಳು ಸೃಷ್ಟಿಯಾದಾಗ ಖುಷಿಪಡುತ್ತೇನೆಯೇ ಹೊರತು ಅವುಗಳಿಗಾಗಿಯೇ ಆಡುವುದಿಲ್ಲ’ ಎಂದು ಅವರು ಸೋಮವಾರದ ಪಂದ್ಯದ ನಂತರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.