ADVERTISEMENT

ಮೆಸ್ಸಿಯ ಮ್ಯಾಜಿಕ್‌ಗಳಿಗೆ ಕೊನೆಯೇ ಇಲ್ಲ: ಅರ್ಜೆಂಟೀನಾ ತಂಡದ ಸ್ಕಲೊನಿ ಪ್ರಶಂಸೆ

ರಾಯಿಟರ್ಸ್
Published 16 ಅಕ್ಟೋಬರ್ 2024, 9:41 IST
Last Updated 16 ಅಕ್ಟೋಬರ್ 2024, 9:41 IST
<div class="paragraphs"><p>ಫುಟ್‌ಬಾಲ್‌ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಬೊಲಿವಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ ಅವರ ಸಂಭ್ರಮ ಕ್ಷಣ</p></div>

ಫುಟ್‌ಬಾಲ್‌ ವಿಶ್ವಕಪ್‌ನ ಅರ್ಹತಾ ಸುತ್ತಿನಲ್ಲಿ ಬೊಲಿವಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಗಳಿಸಿದ ಲಿಯೊನೆಲ್ ಮೆಸ್ಸಿ ಅವರ ಸಂಭ್ರಮ ಕ್ಷಣ

   

ರಾಯಿಟರ್ಸ್ ಚಿತ್ರ

ಬುನಸ್ ಅರೀಸ್: ‘ತಮ್ಮ 37 ವಯಸ್ಸಿನಲ್ಲೂ ಲಿಯೊನೆಲ್ ಮೆಸ್ಸಿ ಅವರ ಕಾಲ್ಜಳಕಗಳ ಮ್ಯಾಜಿಕ್‌ ಮರೆಯಾಗಿಲ್ಲ. ಮೆಸ್ಸಿಯ ಎಷ್ಟೋ ಮ್ಯಾಚ್‌ಗಳಲ್ಲಿ ಬಹಳಷ್ಟು ವಿಸ್ಮಯಗಳನ್ನು ನೋಡಿದ್ದೇನೆ. ಅಂಥ ಅಚ್ಚರಿಗಳು ಈಗಲೂ ಮುಂದುವರಿದಿರುವುದು ಚಮತ್ಕಾರವೇ ಸರಿ’ ಎಂದು ಅರ್ಜೆಂಟೀನಾ ತಂಡದ ವ್ಯವಸ್ಥಾಪಕ ಸ್ಕಲೋನಿ ಬಣ್ಣಿಸಿದ್ದಾರೆ.

ADVERTISEMENT

ವಿಶ್ವಕಪ್‌ ಸಾಕರ್‌ನ ಅರ್ಹತಾ ಸುತ್ತಿನಲ್ಲಿ ಬೊಲಿವಿಯಾ ತಂಡವನ್ನು 6–0 ಗೋಲುಗಳ ಅಂತರದಿಂದ ಪರಾಭವಗೊಳಿಸಿದ ಅರ್ಜೆಂಟೀನಾ ತಂಡದ ನಾಯಕ ಲಿಯೊನೆಲ್ ಮೆಸ್ಸಿ ಅವರ ಆಟದ ವೈಖರಿಯನ್ನು ಮುಕ್ತಕಂಠದಿಂದ ಹೊಗಳಿದ ಅವರು, ‘ಗಾಯದ ಸಮಸ್ಯೆಯಿಂದ ಗುಣಮುಖರಾಗಿ ಅಂತರರಾಷ್ಟ್ರೀಯ ಪಂದ್ಯಗಳಿಗೆ ಮರಳಿದ ಮೆಸ್ಸಿ, ಅವರ ಆಟದಲ್ಲಿ ಕಿಂಚಿತ್ತೂ ವ್ಯತ್ಯಾಸ ಕಂಡುಬಂದಿಲ್ಲ. ಅವರು ತಮ್ಮ ಅದೇ ಶೈಲಿಯ ಮೂಲಕ ಎದುರಾಳಿ ತಂಡಕ್ಕೆ ಆಘಾತ ನೀಡಿದ್ದಾರೆ’ ಎಂದಿದ್ದಾರೆ.

ಜುಲೈನಲ್ಲಿ ಗಾಯದ ಸಮಸ್ಯೆ ಎದುರಿಸಿದ್ದ ಮೆಸ್ಸಿ ನಂತರ ಗುಣಮುಖರಾಗಿ ಅರ್ಹತಾ ಪಂದ್ಯದಲ್ಲಿ ಆಡಿದ್ದರು. ಬೊಲಿವಿಯಾ ವಿರುದ್ಧದ ಪಂದ್ಯದಲ್ಲಿ ಅವರು ಹ್ಯಾಟ್ರಿಕ್‌ ಗೋಲು ಗಳಿಸಿದರು. ಇದು ಮೆಸ್ಸಿ ಅವರ 10ನೇ ಅಂತರರಾಷ್ಟ್ರೀಯ ಹ್ಯಾಟ್ರಿಕ್‌ ಸಾಧನೆಯಾಗಿದೆ.

‘ಪಂದ್ಯದ ಒಂದು ಹಂತದಲ್ಲಿ ಮೆಸ್ಸಿಯ ಆಟ ಕಂಡು ನನ್ನನ್ನೇ ನಾನು ಮರೆತೆ. ನನ್ನ ಸಹಾಯಕ ಕೋಚ್‌ಗೆ ನನ್ನಲ್ಲುಂಟಾಗುತ್ತಿದ್ದ ಭಾವನೆಯನ್ನು ಹೇಳಿದೆ. ಮೆಸ್ಸಿ ಎಷ್ಟು ವರ್ಷ ಆಡಲು ಸಾಧ್ಯವೋ ಅಷ್ಟು ವರ್ಷವೂ ಆಡಬೇಕು ಎಂಬುದು ನನ್ನ ಬಯಕೆ. ಇಡೀ ತಂಡ ಅವರೊಂದಿಗೆ ಸದಾ ಇರಲಿದೆ’ ಎಂದರು.

ಅರ್ಜೆಂಟೀನಾ ತಂಡವು ಗಾಯದ ಸಮಸ್ಯೆ ಹಾಗೂ ಅಮಾನತು ಕ್ರಮದಿಂದಾಗಿ ಕೆಲ ಪ್ರಮುಖ ಆಟಗಾರರನ್ನು ಬೊಲಿವಿಯಾ ಪಂದ್ಯಕ್ಕೆ ಕಳೆದುಕೊಂಡಿತ್ತು. ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಪಂದ್ಯವೊಂದರಲ್ಲಿನ ಆಕ್ರಮಣಕಾರಿ ನಡವಳಿಕೆಯಿಂದಾಗಿ ಗೋಲ್‌ಕೀಪರ್ ಎಮಿಲಿಯಾನೊ ಡಿಬು ಮಾರ್ಟಿನೆಜ್ ಅವರಿಗೆ ಎರಡು ಪಂದ್ಯಗಳ ನಿಷೇಧವನ್ನು ಫಿಫಾ ಹೇರಿದೆ. ಹೀಗಾಗಿ ಅವರು ವೆನೆಜುಲಾ ಹಾಗೂ ಬೊಲಿವಿಯಾ ವಿರುದ್ಧದ ಪಂದ್ಯಗಳಲ್ಲಿ ಆಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.