ಬರ್ಲಿನ್: ಅಮೆರಿಕದಲ್ಲಿ ಕಳೆದ ವಾರ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವಿಗೀಡಾದ ಆಫ್ರೊ–ಅಮೆರಿಕನ್ ವ್ಯಕ್ತಿ ಫ್ಲಾಯ್ಡ್ ಜಾರ್ಜ್ ಪ್ರಕರಣ ಜರ್ಮನಿಯ ಬಂಡೆಸ್‌ಲಿಗಾದಲ್ಲಿ ಪ್ರತಿಧ್ವನಿಸಿದೆ.ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಸಾವಿಗೀಡಾದ ಪ್ರಕರಣವನ್ನು ನಾಲ್ವರು ಯುವ ವಿದೇಶಿ ಫುಟ್‌ಬಾಲ್ ಆಟಗಾರರು ಖಂಡಿಸಿದ್ದಾರೆ.
ಇಂಗ್ಲೆಂಡ್‌ನ ಮಿಡ್‌ಫೀಲ್ಡರ್ ಜಡೊನ್ ಸ್ಯಾಂಚೊ, ಮೊರಾಕೊದ ಅಚ್ರಫ್ ಹಕಿಮಿ ಮತ್ತು ಮಾರ್ಕಸ್ ತುರಮ್ ಅವರು ಕ್ರೀಡಾಂಗಣದಲ್ಲೇ ಈ ಬಗ್ಗೆ ಅಸಮಾಧಾನ ಪ್ರದರ್ಶಿಸಿದ್ದಾರೆ. ಒಂದು ದಿನ ಹಿಂದೆ, ಷಾಲ್ಕೆ ತಂಡದಲ್ಲಿ ಆಡುವ ಅಮೆರಿಕದ ಮಿಡ್‌ಫೀಲ್ಡರ್ ವೆಸ್ಟೊನ್ ಮೆಕೆನ್ನಿ ಕೂಡ ಪೊಲೀಸ್ ದೌರ್ಜನ್ಯ ಖಂಡಿಸಿದ್ದರು. ಇವರೆಲ್ಲ 20 ರಿಂದ 22 ವರ್ಷದೊಳಗಿವರು.
ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೊರುಸಿಯಾ ಡೊರ್ಟ್‌ಮುಂಡ್ ಪರ 6–1 ಗೆಲುವಿನಲ್ಲಿ ಹ್ಯಾಟ್ರಿಕ್ ಸಾಧಿಸಿ ಮಿಂಚಿದ್ದ ಸ್ಯಾಂಚೊ, ಮೊದಲ ಗೋಲಿನ ನಂತರ ಜೆರ್ಸಿ ಕಳಚಿ, ಒಳಗಿದ್ದ ಟಿ–ಶರ್ಟ್ ಮೇಲಿನ ‘ಜಸ್ಟಿಸ್ ಫಾರ್ ಜಾರ್ಜ್ ಫ್ಲಾಯ್ಡ್’ ಎಂಬ ಕೈಬರಹದ ಘೋಷಣೆಪ್ರದರ್ಶಿಸಿದರು.
ಟ್ವಿಟರ್‌ನಲ್ಲೂ ಅವರು ಫ್ಲಾಯ್ಡ್ ಸಾವನ್ನು ಪ್ರಸ್ತಾಪಿಸಿದ್ದಾರೆ. ಸ್ಯಾಂಚೊಗೆ ಹಳದಿ ಕಾರ್ಡ್ ಪ್ರದರ್ಶಿಸಲಾಯಿತು. ಆದರೆ ಇದರಿಂದ ವಿಚಲಿತರಾಗದ ಸಹ ಆಟಗಾರ ಹಕಿಮಿ, 85ನೇ ನಿನಿಷ ಇದೇ ರೀತಿ ಜರ್ಸಿ ತೆಗೆದುಹಾಕಿ ಇಂಥದ್ದೇ ಬರಹ ಪ್ರದರ್ಶಿಸಿದರು.
ಮಿನೆಸೋಟಾದ ಮಿನಿಯಾಪೊಲಿಸ್‌ನಲ್ಲಿ ಆಫ್ರೊ ಅಮೆರಿಕನ್ ಫ್ಲಾಯ್ಡ್ ಅವರು ಮೃತಪಟ್ಟಿದ್ದರು. ಬೇಡಿ ತೊಡಿಸಿದ್ದು, ಅವರ ಕುತ್ತಿಗೆಯ ಮೇಲೆ ಬಿಳಿಯ ಪೊಲೀಸನೊಬ್ಬ ಕೆಲನಿಮಿಷಗಳ ಕಾಲ ಮೊಣಕಾಲನ್ನು ಒತ್ತಿ ಹಿಡಿದಿದ್ದ ಚಿತ್ರ ವಿಡಿಯೊವೊಂದರಲ್ಲಿ ಸೆರೆಯಾಗಿದೆ.
ಹ್ಯಾಮಿಲ್ಟನ್ ಆಕ್ರೋಶ (ಲಂಡನ್ ವರದಿ):ಬಿಳಿಯರ ಪ್ರಾಬಲ್ಯದ ‘ಫಾರ್ಮುಲಾ ವನ್’, ಅಮೆರಿಕದ ಜನಾಂಗೀಯ ತಾರತಮ್ಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ವಿಶ್ವ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮರ್ಸಿಡಿಸ್‌ನ ಡ್ರೈವರ್ ಹ್ಯಾಮಿಲ್ಟನ್, ಈ ಅಮಾನವೀಯ ಹತ್ಯೆ ವಿರುದ್ಧ ತಮ್ಮ ಸಹ ಚಾಲಕರು, ಸೊಲ್ಲು ಎತ್ತದಿರುವುದನ್ನು ಖಂಡಿಸಿದ್ದಾರೆ.
ಅಮೆರಿಕದ ಎನ್‌ಬಿಎ (ಬ್ಯಾಸ್ಕೆಟ್‌ಬಾಲ್) ತಾರೆ ಮೈಕೆಲ್ ಜೋರ್ಡಾನ್ ಮತ್ತು ಹಿರಿಯ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕೂಡ ಫ್ಲಾಯ್ಡ್ ಹತ್ಯೆಯನ್ನು ಖಂಡಿಸಿದವರಲ್ಲಿ ಒಳಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.