ನವದೆಹಲಿ: ಯುವ ಶೂಟರ್ ಸೋನಮ್ ಮಸ್ಕರ್ ಅವರು ಇಲ್ಲಿ ಮಂಗಳವಾರ ಆರಂಭವಾದ ಐಎಸ್‌ಎಸ್‌ಎಫ್ ವಿಶ್ವಕಪ್ ಫೈನಲ್‌ನ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ಆದರೆ, ಇತರ ಶೂಟರ್‌ಗಳು ನಿರಾಸೆ ಮೂಡಿಸಿದರು.
ಎರಡು ವರ್ಷಗಳ ಹಿಂದೆಯಷ್ಟೇ ಸ್ಪರ್ಧಾತ್ಮಕ ಶೂಟಿಂಗ್ ಆರಂಭಿಸಿ, ಕಳೆದ ವರ್ಷ ರಾಷ್ಟ್ರೀಯ ತಂಡಕ್ಕೆ ಬಂದಿದ್ದ 22 ವರ್ಷ ವಯಸ್ಸಿನ ಸೋನಮ್ ಫೈನಲ್‌ನಲ್ಲಿ 252.9 ಪಾಯಿಂಟ್ಸ್ ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಅಭಿನವ್ ಬಿಂದ್ರಾ ಅವರ ಸಾಧನೆಯಿಂದ ಸ್ಫೂರ್ತಿ ಪಡೆದ ಸೋನಮ್ ಅರ್ಹತಾ ಸುತ್ತಿನಲ್ಲಿ 632.1ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದು ಫೈನಲ್‌ಗೆ ಪ್ರವೇಶಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಚೀನಾದ ಹುವಾಂಗ್ ಯುಟಿಂಗ್ (254.5) ವಿಶ್ವದಾಖಲೆಯ ಅಂಕದೊಂದಿಗೆ ಚಿನ್ನ ಜಯಿಸಿದರು. ಭಾರತದ ಮತ್ತೊಬ್ಬ ಸ್ಪರ್ಧಿ ತಿಲೋತ್ತಮಾ ಸೇನ್ ಅವರು ಎಂಟು ಶೂಟರ್‌ಗಳ ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚು ತಪ್ಪಿಸಿಕೊಂಡಿದ್ದ ಅರ್ಜುನ್ ಬಾಬುತಾ ಇಲ್ಲೂ ನಿರಾಸೆ ಮೂಡಿಸಿದರು. ಪುರುಷರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದರು.
ಒಲಿಂಪಿಯನ್ ರಿದಂ ಸಾಂಗ್ವಾನ್ ಅವರು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಯುವ ಶೂಟರ್ ಸುರಭಿ ರಾವ್ ಐದನೇ ಸ್ಥಾನ ಪಡೆದರು.
ಪ್ಯಾರಿಸ್ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ, ಫ್ರಾನ್ಸ್‌ನ ಕ್ಯಾಮಿಲ್ಲೆ ಜೆಡ್ರೆಜೆವ್‌ಸ್ಕಿ ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್‌ನಲ್ಲಿ ಚಿನ್ನದ ಪದಕ ಗೆದ್ದರು. ಅವರು 2022ರ ವಿಶ್ವಕಪ್ ಫೈನಲ್‌ನಲ್ಲೂ ಚಿನ್ನ ಗೆದ್ದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.