ಒಲಿಂಪಿಕ್ಸ್‌ನಲ್ಲಿಭಾರತವು ಹಲವು ಪದಕಗಳನ್ನು ಗೆದ್ದ ಬೆನ್ನಲ್ಲೇ, ಈ ಹಣಕಾಸು ವರ್ಷದಲ್ಲಿ ಕ್ರೀಡಾ ವಿಭಾಗಕ್ಕೆ ಕೇಂದ್ರ ಸರ್ಕಾರವು ತನ್ನ ಬಜೆಟ್‌ನಲ್ಲಿ ಮೀಸಲಿರಿಸಿದ್ದ ಅನುದಾನವನ್ನು ಕಡಿತ ಮಾಡಿತ್ತು ಎಂಬ ವಿಷಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಒಂದೆಡೆ, ಕ್ರೀಡೆಗೆ ಕೇಂದ್ರ ಸರ್ಕಾರವು ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಮತ್ತೊಂದೆಡೆ ಕ್ರೀಡಾ ವಿಭಾಗಕ್ಕೆ ಬಜೆಟ್‌ನಲ್ಲಿ ಹಾಕಿರುವ ಕತ್ತರಿಯನ್ನು ಬೊಟ್ಟು ಮಾಡಿ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
2020-21ನೇ ಸಾಲಿನಲ್ಲಿ ಟೋಕಿಯೊ ಒಲಿಂಪಿಕ್ಸ್ ನಿಗದಿಯಾಗಿದ್ದ ಕಾರಣ, ಬಜೆಟ್‌ನಲ್ಲಿ ₹ 2,826 ಕೋಟಿಯನ್ನು ಕ್ರೀಡೆಗೆ ಮೀಸಲಿರಿಸಲಾಗಿತ್ತು. ಕೋವಿಡ್ ಲಾಕ್ಡೌನ್ನ ಕಾರಣ ಈ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಲಿಲ್ಲ. ಲಾಕ್‌ಡೌನ್ ತೆರವಾದ ನಂತರವೂ ಈ ಅನುದಾನದ ಹೆಚ್ಚಿನಂಶ ಬಳಕೆಯಾಗದೇ ಉಳಿಯಿತು. ಒಟ್ಟಾರೆ 2020-21ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ ಸರ್ಕಾರವು ₹ 1,800 ಕೋಟಿ ಮಾತ್ರವೇ ಬಿಡುಗಡೆ ಮಾಡಿತ್ತು. ಕ್ರೀಡಾ ಚಟುವಟಿಕೆಗಳು ನಡೆಯದ ಕಾರಣ ಅನುದಾನ ಖರ್ಚಾಗಿಲ್ಲ ಎಂದು ಸರ್ಕಾರವು ಸಮರ್ಥನೆ ನೀಡಿತ್ತು.
2021-22ನೇ ಸಾಲಿಗೆ ಟೋಕಿಯೊ ಒಲಿಂಪಿಕ್ಸ್ ಮುಂದೂಡಲಾಗಿತ್ತು. ಆದರೆ ಈ ಸಾಲಿನ ಬಜೆಟ್ನಲ್ಲಿ ಕ್ರೀಡೆಗೆ ಮೀಸಲಿರಿಸಿದ ಅನುದಾನದಲ್ಲೇ ಸರ್ಕಾರ ಕಡಿತ ಮಾಡಿತ್ತು. ಈ ಸಾಲಿನಲ್ಲಿ ಒಟ್ಟು ₹ 2,596 ಕೋಟಿ ಅನುದಾನವನ್ನು ಕ್ರೀಡೆಗೆ ಘೋಷಿಸಲಾಗಿದೆ. ಇದರಲ್ಲಿ ಎಷ್ಟು ಅನುದಾನವನ್ನು ಈಗ ಬಳಕೆ ಮಾಡಲಾಗಿದೆ ಎಂಬುದರ ಮಾಹಿತಿಯನ್ನು ಸರ್ಕಾರ ಇನ್ನಷ್ಟೇ ನೀಡಬೇಕಿದೆ.
ಕೈಗೆ ಬಾರದ ನಗದು ಪುರಸ್ಕಾರ
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಕ್ರೀಡಾಪುಟಗಳಿಗೆ ನಗದು ಪುರಸ್ಕಾರ ಘೋಷಿಸುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾ ಅವರು 2019ರಲ್ಲಿ ಮಾಡಿದ್ದ ಟ್ವೀಟ್ ಒಂದನ್ನು ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, ಸರ್ಕಾರಗಳು ನೀಡುವ ಭರವಸೆಯನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಜರಂಗು ಪುನಿಯಾ ಅವರಿಗೆ ಹರಿಯಾಣ ಸರ್ಕಾರವು
₹ 3 ಕೋಟಿ ನಗದು ಪುರಸ್ಕಾರವನ್ನು ಘೋಷಿಸಿತ್ತು. ಆ ಘೋಷಣೆಯ ಟ್ವೀಟ್‌ನ ಸ್ಕ್ರೀನ್ ಶಾಟ್ ಅನ್ನು ಟ್ಯಾಗ್ ಮಾಡಿ 2019ರ ಜನವರಿ 26ರಂದು ಭಜರಂಗ್ ಪುನಿಯಾ ಟ್ವೀಟ್ ಮಾಡಿದ್ದರು.
‘ಕ್ರೀಡಾಪಟುಗಳಿಗೆ ನೀವು ನಗದು ಪುರಸ್ಕಾರ ಘೋಷಿಸಿದಾಗ ಅದು ಅವರಿಗೆ ನೀಡಿದ ಆಮಿಷವಾಗಿರುವುದಿಲ್ಲ, ಬದಲಿಗೆ ಅವರ ಜೆತಯಲ್ಲಿ ಇರುತ್ತೇವೆ ಎಂಬುದರ ಭರವಸೆಯಾಗಿರುತ್ತದೆ. ನೀವು ನೀಡಿದ ಭರವಸೆಯನ್ನು ಈಡೇರಿಸದೇ ಇದ್ದರೆ, ಭವಿಷ್ಯದಲ್ಲಿ ಯಾವ ಕ್ರೀಡಾಪಟುವು ನಿಮ್ಮನ್ನು ನಂಬುತ್ತಾರೆ?’ ಎಂದು ಭಜರಂಗ್ ಪುನಿಯಾ ಬೇಸರ ವ್ಯಕ್ತಪಡಿಸಿದ್ದರು. ಆ ಟ್ವೀಟ್ ಅನ್ನು ರಿಟ್ವೀಟ್ ಮಾಡಿ, ನೀರಜ್ ಚೋಪ್ರಾ ಸಹ ಅದೇ ದಿನ ತಮ್ಮ ಬೇಸರ ವ್ಯಕ್ತಪಡಿಸಿದ್ದರು.
‘ನಾವು ಪದಕ ಗೆದ್ದು ಬಂದಾಗ ಇಡೀ ದೇಶವೇ ಸಂಭ್ರಮಿಸುತ್ತದೆ. ನಾವು ಹರಿಯಾಣದವರು ಎಂದು ರಾಜ್ಯದವರು ಹೆಮ್ಮೆ ಪಡುತ್ತಾರೆ. ನಾವು ವಿಶ್ವ ಕ್ರೀಡಾಜಗತ್ತಿನಲ್ಲಿ ಹರಿಯಾಣದ ಮುದ್ರೆ ಒತ್ತಿದ್ದೇವೆ ಎಂದು ಹೇಳಲಾಗುತ್ತದೆ. ಇವೆಲ್ಲಾ ಒತ್ತಪಟ್ಟಿಗಿರಲಿ. ಆದರೆ ನೀವು ಘೋಷಿಸುವ ನಗದು ಪುರಸ್ಕಾರವನ್ನು ನೀಡಿ. ಆಗ ನಾವು ಹಣಕಾಸಿನ ವಿಚಾರವನ್ನು ಬದಿಗೊತ್ತಿ, ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವತ್ತ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಬಹುದು’ ಎಂದು ನೀರಜ್ ಚೋಪ್ರಾ ಟ್ವೀಟ್ ಮಾಡಿದ್ದರು.
ಈ ಟ್ವೀಟ್‌ಗಳನ್ನು ಬಳಸಿಕೊಂಡು ರಾಹುಲ್ ಗಾಂಧಿ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದರು. ‘ನೀವು ಕ್ರೀಡಾಪಟುಗಳಿಗೆ ವಿಡಿಯೊ ಕರೆ ಮಾಡಿದ್ದು ಸಾಕು, ಅವರಿಗೆ ಘೋಷಿಸಿದ್ದ ನಗದು ಪುರಸ್ಕಾರವನ್ನು ನೀಡಿ’ ಎಂದು ರಾಹುಲ್ ಹರಿಹಾಯ್ದಿದ್ದರು.
ಖೇಲೋ ಇಂಡಿಯಾಗೆಭಾರಿ ಅನುದಾನ
ಪ್ರತಿಭೆಗಳ ಶೋಧಕ್ಕಾಗಿ ಹುಟ್ಟಿಕೊಂಡಿದ್ದ ಮಹತ್ವದ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಭಾರಿ ಅನುದಾನ ನೀಡಿದೆ. ಆರಂಭದಲ್ಲಿ ₹97 ಕೋಟಿ ಅನುದಾನದ ನೀಡಿದ್ದ ಸರ್ಕಾರ ಐದಾರು ವರ್ಷಗಳಲ್ಲಿ ಈ ಮೊತ್ತವನ್ನು ₹890 ಕೋಟಿಗೆ ಏರಿಸಿತು. ಆದರೆಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ, ಸುಮಾರು ₹230 ಕೋಟಿಯಷ್ಟು ಕಡಿತ ಮಾಡಿತು.ಕೇಂದ್ರ ಸರ್ಕಾರ 2021-22ನೇ ಆರ್ಥಿಕ ವರ್ಷದಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಕ್ರೀಡಾ ವಲಯದ ಅನುದಾನವನ್ನು ಕಡಿತ ಮಾಡಿದ್ದರಿಂದ ಖೇಲೋ ಇಂಡಿಯಾದ ಅನುದಾನವೂ ಇಳಿಕೆಯಾಗಿತ್ತು.
ಕೋವಿಡ್ ಸಾಂಕ್ರಾಮಿಕದ ಕಾರಣ ವಿಶ್ವದಾದ್ಯಂತ ಎಲ್ಲಾ ಕ್ರೀಡಾಕೂಟಗಳು ಸ್ಥಗಿತಗೊಂಡವು.ಟೋಕಿಯೊ ಒಲಿಂಪಿಕ್ಸ್ ನಿಗದಿತ ವೇಳಾಪಟ್ಟಿ ಪ್ರಕಾರ ಜರುಗಲಿಲ್ಲ. ಬಹುತೇಕ ಎಲ್ಲಾ ಕ್ರೀಡೆಗಳಲ್ಲಿ ದೇಶೀಯ ಪಂದ್ಯಗಳನ್ನು ರದ್ದುಗೊಳಿಸಲಾಯಿತು. ಹೆಚ್ಚಿನ ಭಾರತೀಯ ಕ್ರೀಡಾಪಟುಗಳಿಗೆ ಯಾವುದೇ ವಿದೇಶಿ ತರಬೇತಿ ಮತ್ತು ಸ್ಪರ್ಧೆ ಸಾಧ್ಯವಾಗಲಿಲ್ಲ. ಲಾಕ್‌ಡೌನ್‌ನಿಂದಾಗಿ ಬಹುತೇಕ ರಾಷ್ಟ್ರೀಯ ಶಿಬಿರಗಳನ್ನು ಮುಚ್ಚಿದ್ದರಿಂದ ಕಳೆದ ವರ್ಷ ಯಾವುದೇ ಚಟುವಟಿಕೆ ಇರಲಿಲ್ಲ.ಮೂಲಸೌಕರ್ಯ ಅಭಿವೃದ್ಧಿ, ಕ್ರೀಡಾಂಗಣಗಳ ಉನ್ನತೀಕರಣದ ದೃಷ್ಟಿಯಿಂದಲೂ ಯಾವುದೇ ಪ್ರಗತಿ ಕಂಡುಬರಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏನಿದು ಖೇಲೋ ಇಂಡಿಯಾ?
ದೇಶದ ಪ್ರತಿಭಾವಂತ ಕ್ರೀಡಾಪಟುಗಳ ಶೋಧಕ್ಕಾಗಿ ಕೇಂದ್ರ ಸರ್ಕಾರ 2018ರಲ್ಲಿ ಜಾರಿಗೊಳಿಸಿದ ಕಾರ್ಯಕ್ರಮವೇ ‘ಖೇಲೋ ಇಂಡಿಯಾ’. ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆ ಮಾಡಬಲ್ಲ ಕ್ರೀಡಾಳುಗಳನ್ನು ಹುಡುಕಲು ದೀರ್ಘಕಾಲೀನ ಕಾರ್ಯಕ್ರಮವಾಗಿ ಖೇಲೋ ಇಂಡಿಯಾ ರೂಪುತಳೆಯಿತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಲ್ಲ ಕ್ರೀಡಾಪಟುಗಳಿಗೆ ಅಗತ್ಯ ಮೂಲಸೌಕರ್ಯ, ತರಬೇತಿ, ಭತ್ಯೆ ನೀಡಲಾಗುತ್ತದೆ.ಈ ಯೋಜನೆಯು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಮತ್ತು ಎಲ್ಲಾ ಕ್ರೀಡೆಗಳಿಗೆ ಬಲವಾದ ಚೌಕಟ್ಟನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.
ಪ್ರತಿ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಉದ್ಘಾಟನಾ ಆವೃತ್ತಿಯಲ್ಲಿ 16 ಕ್ರೀಡೆಗಳಲ್ಲಿ ಸ್ಪರ್ಧಿಗಳು ಭಾಗವಹಿಸಿದ್ದರು. ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಮೊದಲಾದ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ. ಪ್ರತಿ ಕ್ರೀಡೆಗೂ ಪ್ರತ್ಯೇಕ ‘ಪ್ರತಿಭಾ ಶೋಧ ಸಮಿತಿ’ ಇದೆ.
ಟೋಕಿಯೊ ಒಲಿಂಪಿಕ್ಸ್ ನಂತರ ಖೇಲೋ ಇಂಡಿಯಾ ಗೇಮ್ಸ್ 2021 ಅನ್ನು ಹರಿಯಾಣದ ಪಂಚಕುಲಾದಲ್ಲಿ ಆಯೋಜಿಸಲಾಗಿದೆ. ಮೊದಲ ಆವೃತ್ತಿಯಲ್ಲಿ ಹರಿಯಾಣ ಅತಿಹೆಚ್ಚು ಪದಕ ಪಡೆದ ಹೆಗ್ಗಳಿಕೆ ಗಳಿಸಿತ್ತು. ಎರಡನೇ ಮತ್ತು ಮೂರನೇ ಆವೃತ್ತಿಯಲ್ಲಿ ಮಹಾರಾಷ್ಟ್ರ ಮೇಲುಗೈ ಸಾಧಿಸಿತ್ತು.
ಒಲಿಂಪಿಕ್ಸ್‌ಗೆ ಸಿದ್ಧತೆ: ಯುವೆ ಹಾನ್ ಆಕ್ಷೇಪ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದನೀರಜ್ ಚೋಪ್ರಾ ಅವರ ಮುಖ್ಯ ತರಬೇತುದಾರ ಆಗಿರುವ 58 ವರ್ಷದ ಜರ್ಮನಿಯ ಯುವೆ ಹಾನ್ ಅವರು ಕ್ರೀಡಾಕೂಟಕ್ಕೆ ಮಾಡಿಕೊಂಡ ಸಿದ್ಧತೆ ಬಗ್ಗೆ, ತಿಂಗಳ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದರು. ಒಲಿಂಪಿಕ್ಸ್‌ಗೆ ನೀಡುವ ತರಬೇತಿ ಯೋಜಿತವಾಗಿಲ್ಲ ಎಂದಿದ್ದ ಅವರು, ಕ್ರೀಡಾಪಟುಗಳ ಆಹಾರಕ್ರಮವೂ ಸೂಕ್ತವಾಗಿಲ್ಲ ಎಂದಿದ್ದರು. ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ 100 ಮೀಟರ್ ಎಸೆದ ದಾಖಲೆ ಇವರದ್ದು. ಈ ಸಾಧನೆ ಮಾಡಿದ ಜಗತ್ತಿನ ಏಕೈಕ ವ್ಯಕ್ತಿ ಇವರು.
ದೇಶದ ಅಗ್ರ ಕ್ರೀಡಾ ಸಂಸ್ಥೆಗಳಾದ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಮತ್ತು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಈ ಬೃಹತ್ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳನ್ನು ತಯಾರಿಸಲು ಸಾಕಷ್ಟು ಮುತುವರ್ಜಿ ವಹಿಸಿಲ್ಲ ಎಂದು ಆರೋಪಿಸಿದ್ದರು.ತನಗೆ ಒಪ್ಪಿಗೆಯಿಲ್ಲದಿದ್ದರೂ ಒಪ್ಪಂದಕ್ಕೆ ಸಹಿ ಹಾಕಲು ಬೆದರಿಕೆ ಒಡ್ಡಲಾಗಿತ್ತು ಎಂದು ಅವರು ಆರೋಪಿಸಿದ್ದರು.
‘ಪಟಿಯಾಲದಲ್ಲಿ ತರಬೇತಿ ಪಡೆಯುತ್ತಿರುವ ನೀರಜ್ ಚೋಪ್ರಾ ಅವರನ್ನು ಯುರೋಪ್‌ಗೆತರಬೇತಿ ಶಿಬಿರಕ್ಕೆ ಕಳುಹಿಸಬೇಕಿತ್ತು. ಆದರೆ ಈ ಎರಡೂ ಸಂಸ್ಥೆಗಳಿಗೆ ಈ ಬಗ್ಗೆ ಆಸಕ್ತಿಯಿಲ್ಲ.ಶಿಬಿರಗಳ ಹೊರತಾಗಿ, ಪೌಷ್ಠಿಕಾಂಶ ತಜ್ಞರ ಸಲಹೆಯಂತೆ ಕ್ರೀಡಾಪಟುಗಳಿಗೆ ಪೂರಕ ಪದಾರ್ಥಗಳನ್ನು ಒದಗಿಸಲು ಕೇಳಿದಾಗಲೂ ಸರಿಯಾದ ಉತ್ತರ ಬರಲಿಲ್ಲ’ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.