ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಗಮನ ಸೆಳೆದಿರುವ ಬೆಂಗಳೂರು, ಕ್ರೀಡೆಯಲ್ಲಿಯೂ ಉನ್ನತ ಸಾಧನೆ ಮಾಡಬೇಕಿದೆ. ಅದಕ್ಕಾಗಿ ದೇವನಹಳ್ಳಿ ಸಮೀಪದ 50 ಎಕರೆ ಪ್ರದೇಶದಲ್ಲಿ ಕ್ರೀಡಾ ನಗರಿ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ರಾಜ್ಯ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯು ಕಂಠೀರವ ಕ್ರೀಡಾಂಗಣದ ಒಲಿಂಪಿಕ್ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಕ್ರೀಡಾ ಮೀಸಲಾತಿ ಕಲ್ಪಿಸಿದೆ. ಮೂಲಸೌಲಭ್ಯಗಳ ಅಭಿವೃದ್ಧಿಗೂ ಒತ್ತು ನೀಡಿದೆ. ಅದಕ್ಕಾಗಿಯೇ ಸಕಲ ಸೌಲಭ್ಯಗಳು ಇರುವ ಕ್ರೀಡಾ ನಗರಿ ನಿರ್ಮಾಣವಾಗಲಿದೆ. ಅಲ್ಲದೇ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ವಸ್ತುಸಂಗ್ರಹಾಲಯವನ್ನು ನಿರ್ಮಿಸುವ ಚಿಂತನೆ ಕೂಡ ನಡೆದಿದೆ’ ಎಂದು ಹೇಳಿದರು.
‘ಈಗ ಸಿಗುತ್ತಿರುವ ಸೌಲಭ್ಯಗಳನ್ನು ಬಳಸಿಕೊಂಡು ಯುವಜನತೆಯು ಉತ್ತಮ ಕ್ರೀಡಾಪಟುಗಳಾಗಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕದ ಕೊರತೆಯನ್ನು ನೀಗಿಸಬೇಕು. ದುಶ್ಚಟಗಳಿಂದ ದೂರವಿರಲು ಕ್ರೀಡೆ ಸಹಕಾರಿ. ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಆಟೋಟಗಳು ಬೇಕು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಲಿಂಪಿಕ್ಸ್ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ ಶ್ರೀಹರಿ ನಟರಾಜ್, ದಿನಿಧಿ ದೇಸಿಂಗು, ಎಬಿ ಸುಬ್ಬಯ್ಯ, ಸಿ.ಎಸ್. ಪೂಣಚ್ಚ, ಅನಿಲ್ ಅಲೆಕ್ಸಾಂಡರ್, ವಿ.ಎಸ್. ವಿನಯ, ನಿಕಿನ್ ತಿಮ್ಮಯ್ಯ, ಕೆ.ಕೆ. ಪೂಣಚ್ಚ, ಬಿ.ಸಿ. ಪೂಣಚ್ಚ, ಎಚ್.ಎಸ್. ಮೋಹಿತ್, ಸಿ.ಬಿ. ಪೂವಣ್ಣ, ಮೊಹಮ್ಮದ್ ರಾಹಿಲ್, ದಿಲೀಪ್ ಕುಮಾರ್, ದಿಲೀಪ್ ಗುರುಮೂರ್ತಿ, ಆರ್. ರಾಜನ್, ಅಂಜು ಬಾಬಿ ಜಾರ್ಜ್, ಅರ್ಜುನ್ ಹಾಲಪ್ಪ, ಡಾ. ಸಿ. ಪ್ರಭಾಕರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತ ಚೇತನ್, ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ಕೆ. ಗೋವಿಂದರಾಜು, ಮಹಾಪ್ರಧಾನ ಕಾರ್ಯದರ್ಶಿ ಅನಂತರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.