ಪವನ ದೇಶಪಾಂಡೆ (ಕ್ರಿಕೆಟ್)
ನವನಗರದ ಪವನ ದೇಶಪಾಂಡೆ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿದ್ದಾರೆ. ಐದು ಪ್ರಥಮ ದರ್ಜೆ, 21 ಲೀಸ್ಟ್ ಎ ಮತ್ತು 11 ಟಿ–20 ಪಂದ್ಯಗಳಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿಯೂ ಆಡಿದ್ದಾರೆ. 2017ರಲ್ಲಿ ವಿಜಯ ಹಜಾರೆ ಟೂರ್ನಿಯಲ್ಲಿ ಆಡುವ ಮೂಲಕ ಲೀಸ್ಟ್ ‘ಎ’ ಮಾದರಿಗೆ ಪದಾರ್ಪಣೆ ಮಾಡಿದ್ದರು.
ನಾಲ್ಕನೇ ತರಗತಿಯಲ್ಲಿದ್ದಾಗ ಪವನ್ ಧಾರವಾಡದಲ್ಲಿ ವಿಎಂಸಿಎ ಅಕಾಡೆಮಿಯಲ್ಲಿ ವೃತ್ತಿಪರ ತರಬೇತಿ ಆರಂಭಿಸಿದರು. ಏಳನೇ ತರಗತಿಯಲ್ಲಿ ಓದುವಾಗ ಕ್ರಿಕೆಟ್ ಕ್ಲಬ್ ಆಫ್ ಕರ್ನಾಟಕ (ಸಿಸಿಕೆ) ‘ಬಿ’ ತಂಡದಿಂದ ಕೆಎಸ್‌ಸಿಎ ಎರಡನೇ ಡಿವಿಷನ್ ಟೂರ್ನಿಯಲ್ಲಿ ಆಡಿದ್ದರು. 13, 15 ಮತ್ತು 19 ವರ್ಷ ಹೀಗೆ ವಿವಿಧ ವಯೋಮಿತಿಯೊಳಗಿನ ಟೂರ್ನಿಗಳಲ್ಲಿ ಧಾರವಾಡ ವಲಯದ ಪರ ಆಡಿದ್ದಾರೆ.
ವೀಣಾ ಅಡಗಿಮನಿ (ಅಥ್ಲೆಟಿಕ್ಸ್)
ಹುಬ್ಬಳ್ಳಿಯ ವೀಣಾ ಎಚ್. ಅಡಗಿಮನಿ ಅಥ್ಲೆಟಿಕ್ಸ್‌ನಲ್ಲಿ ಸಾಧನೆಯ ಛಾಪು ಮೂಡಿಸಿದ್ದಾರೆ. 2011ರಲ್ಲಿ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್‌ನ 100 ಮೀಟರ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಕಾನೂನು ವಿಶ್ವವಿದ್ಯಾಲಯದ ಕ್ರೀಡಾಕೂಟದ 100 ಮತ್ತು 200 ಮೀಟರ್ ವಿಭಾಗದಲ್ಲಿ ಪದಕಗಳನ್ನು ಗೆದ್ದು ಮತ್ತಷ್ಟು ಸಾಧನೆಯ ಭರವಸೆ ಮೂಡಿಸಿದ್ದಾರೆ.
ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅನುಭವಿ ವೀಣಾ ಎರಡು ವರ್ಷಗಳ ಹಿಂದೆ ಧಾರವಾಡದಲ್ಲಿ ನಡೆದ ಕಾನೂನು ವಿ.ವಿ. ಕೂಟದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಎರಡು ದಾಖಲೆಗಳನ್ನು ನಿರ್ಮಿಸಿದ್ದರು. 13.24 ಸೆಕೆಂಡುಗಳಲ್ಲಿ ಗುರಿ ತಲುಪಿ 2012ರಲ್ಲಿ ಮಂಗಳೂರಿನ ಎಸ್‌ಡಿಎಂ ಕಾಲೇಜಿನ ಶೀತಲ್ ನಿರ್ಮಿಸಿದ್ದ ದಾಖಲೆ ಪುಡಿಗಟ್ಟಿದ್ದರು. 400 ಮೀಟರ್ ಓಟದಲ್ಲಿಯೂ ದಾಖಲೆ ಮಾಡಿದ್ದರು.
ತನಿಷಾ (ಚೆಸ್)
ಹುಬ್ಬಳ್ಳಿಯ ತನಿಷಾ ಶೀತಲ್ ಗೋಟಡ್ಕಿ ಶಾಲಾ ಮಟ್ಟದ ಮತ್ತು ಕಾಮನ್‌ವೆಲ್ತ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. 2018ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಚೆಸ್ ಚಾಂಪಿಯನ್‌ಷಿಪ್‌ನ 16 ವರ್ಷದ ಒಳಗಿನವರ ವಿಭಾಗದಲ್ಲಿ ಪಾಲ್ಗೊಂಡಿದ್ದರು.
ಇದೇ ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಾಲಾ ಕ್ರೀಡಾಕೂಟದ 17 ವರ್ಷದ ಒಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. 2018ರಲ್ಲಿ ಮೈಸೂರಿನಲ್ಲಿ ನಡೆದಿದ್ದ ರಾಜ್ಯ ಶಾಲಾ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದರು. 2015–16ರ ಶೈಕ್ಷಣಿಕ ವರ್ಷದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ತನಿಷಾ ಸ್ಪರ್ಧಿಸಿದ್ದರು. ಮೊದಲ ಬಾರಿಗೆ 2015ರಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟದ ಟೂರ್ನಿಗೆ ಆಯ್ಕೆಯಾಗಿದ್ದರು.
ಗ್ಲೋರಿಯಾ ಅಠವಾಲೆ (ಬ್ಯಾಡ್ಮಿಂಟನ್)
ಹುಬ್ಬಳ್ಳಿಯ ಗ್ಲೋರಿಯಾ ವಿ. ಆಠವಾಲೆ ಬ್ಯಾಡ್ಮಿಂಟನ್‌ನಲ್ಲಿ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಇದೇ ವರ್ಷದ ಜನವರಿಯಲ್ಲಿ ಮಂಗಳೂರಿನಲ್ಲಿ ನಡೆದ ಅಖಿಲ ಭಾರತ ಮುಕ್ತ ಬ್ಯಾಡ್ಮಿಂಟನ್ ಟೂರ್ನಿಯ 19 ವರ್ಷದ ಒಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿಯೂ ಗ್ಲೋರಿಯಾ ಪ್ರಶಸ್ತಿ ಜಯಿಸಿದರು.
ನಾಲ್ಕು ವರ್ಷಗಳ ಹಿಂದೆ ವೃತ್ತಿಪರ ತರಬೇತಿ ಆರಂಭಿಸಿದ ಗ್ಲೋರಿಯಾ ಬೆಂಗಳೂರಿನಲ್ಲಿ ನಡೆದಿದ್ದ 15 ವರ್ಷದ ಒಳಗಿನವರ ಸಬ್ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡಿದ್ದರು. ನಾಗಪುರ, ಪಟ್ನಾ, ಕಲಬುರ್ಗಿ, ಹೈದರಾಬಾದ್‌ನಲ್ಲಿ ನಡೆದಿದ್ದ ರ‍್ಯಾಂಕಿಂಗ್ ಟೂರ್ನಿಗಳಲ್ಲಿ ಗ್ಲೋರಿಯಾ ಭಾಗವಹಿಸಿದ್ದರು. ಹುಬ್ಬಳ್ಳಿಯ ಮಂಜುನಾಥ ಪೇಟ್ಕರ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಜಿಮ್ನಾಸ್ಟಿಕ್‌ನಲ್ಲಿ ಹೊಸ ಅಲೆ
ದೇಶದಾದ್ಯಂತ ಜಿಮ್ನಾಸ್ಟಿಕ್ ಕ್ರೀಡೆಯ ಅಲೆ ಜೋರಾಗಿದೆ. ಇದರಿಂದ ಧಾರವಾಡ ಜಿಲ್ಲೆ ಕೂಡ ಹೊರತಲ್ಲ. ಧಾರವಾಡದಲ್ಲಿರುವ ಬಾಲಮಾರುತಿ ಜಿಮ್ನಾಸ್ಟಿಕ್ ಕೇಂದ್ರ ಈ ಭಾಗದ ಜಿಮ್ನಾಸ್ಟ್‌ಗಳ ಸಾಧನೆಯ ಆಸೆಗೆ ಬಲ ತುಂಬುತ್ತಿದೆ. ವಿಠ್ಠಲ ಗೋಪಾಲ ಮುರ್ತುಗುಟೆ ಸಾಹಸ ಕ್ರೀಡೆಯ ತರಬೇತಿ ನೀಡುತ್ತಿದ್ದಾರೆ.
ಸುಧೀರ ದೇವದಾಸ್, ವಿಶಾಲ ಆಲೂರು, ಅಂತರ ವಿಶ್ವವಿದ್ಯಾಲಯಗಳ ಟೂರ್ನಿಯಲ್ಲಿ ಸಂಜಯ ಹಂಪಣ್ಣನವರ, ಪವನ ಮುರ್ತುಗುಟೆ, ಪೂರ್ಣಿಮಾ ಗೋಧಿ ಪದಕಗಳನ್ನು ಜಯಿಸಿದ್ದಾರೆ.
ವಿಜಯಪುರ, ಬೀದರ್, ಬೆಂಗಳೂರು, ತುಮಕೂರಿನಿಂದ ಬಂದು ಧಾರವಾಡದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಬಾಲಕಿಯರಿಗೆ ವಾಲ್ಟ್, ಅನ್ ಇವನ್ ಬಾರ್ಸ್, ಬ್ಯಾಲೆನ್ಸ್ ಬೀಮ್, ಫ್ಲೋರ್ ಬಾಲಕರಿಗೆ ಫ್ಲೋರ್, ಪೊಮೆಲ್ ಹಾರ್ಸ್, ಸ್ಟಿಲ್ ರಿಂಗ್ಸ್, ವಾಲ್ಟ್, ಪ್ಯಾರಮಲ್ ಬಾರ್ಸ್ ಮತ್ತು ಹಾರಿಜಂಟಲ್ ಬಾರ್ ವಿಭಾಗದಲ್ಲಿ ತರಬೇತಿ ನೀಡಲಾಗುತ್ತದೆ. ಪೋಷಕರು ಕೂಡ ಮಕ್ಕಳ ಸಾಹಸಕ್ಕೆ ನೆರವಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.