ADVERTISEMENT

ಕುಸ್ತಿ ಚಾಂಪಿಯನ್‌ಷಿಪ್‌: ಭಾರತ ತಂಡಗಳಿಗೆ ಒಪ್ಪಿಗೆ ನೀಡಿದ ಕೇಂದ್ರ

ಪಿಟಿಐ
Published 26 ಅಕ್ಟೋಬರ್ 2024, 0:10 IST
Last Updated 26 ಅಕ್ಟೋಬರ್ 2024, 0:10 IST
<div class="paragraphs"><p>ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ನಿವಾಸದ ಮುಂದೆ ಸೇರಿದ ಕುಸ್ತಿಪಟುಗಳು</p></div>

ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ನಿವಾಸದ ಮುಂದೆ ಸೇರಿದ ಕುಸ್ತಿಪಟುಗಳು

   

ಪಿಟಿಐ ಚಿತ್ರ

ನವದೆಹಲಿ: ಅಲ್ಬೇನಿಯಾದಲ್ಲಿ ಇದೇ 28ರಿಂದ ನಡೆಯಲಿರುವ ವಿಶ್ವ ಸೀನಿಯರ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಭಾರತದ ತಂಡಗಳಿಗೆ ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ.

ADVERTISEMENT

ತಂಡ ಕಳುಹಿಸುವ ನಿರ್ಧಾರದಿಂದ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯು ಎಫ್‌ಐ) ಗುರುವಾರ ಹಿಂದೆಸರಿದ ನಂತರ, ಈ ಕೂಟಕ್ಕೆ ಆಯ್ಕೆಯಾಗಿದ್ದ ಎಲ್ಲ 12 ಮಂದಿ ಪೈಲ್ವಾನರು (ಫ್ರೀಸ್ಟೈಲ್ ಮತ್ತು ಗ್ರೀಕೊ ರೋಮನ್ ವಿಭಾಗ) ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಅವರ ನಿವಾಸದೆದುರು ಸೇರಿದ್ದರು. ಸಚಿವರು ಮಧ್ಯಪ್ರವೇಶಿ ಸಬೇಕು ಮತ್ತು ಸಮಸ್ಯೆ ಬಗೆಹರಿಸ
ಬೇಕೆಂದು ಒತ್ತಾಯಿಸಿದ್ದರು.

ಸೀನಿಯರ್ ತಂಡಕ್ಕೆ ಮತ್ತು 23 ವರ್ಷದೊಳಗಿನವರ ತಂಡಕ್ಕೆ ಫೆಡರೇಷನ್‌ ಆಯ್ಕೆ ಟ್ರಯಲ್ಸ್‌ ನಡೆಸಿರುವುದನ್ನು ಪ್ರಶ್ನಿಸಿ ಮಾಜಿ ಒಲಿಂಪಿಯನ್‌ ಸಾಕ್ಷಿ ಮಲಿಕ್ ಅವರ ಪತಿ, ಕುಸ್ತಿಪಟು ಸತ್ಯವ್ರಥ ಕಾದಿಯಾನ್ ಅವರು ಕೋರ್ಟ್‌ ಮೊರೆಹೋಗಿದ್ದಾರೆ. ನ್ಯಾಯಾಲಯವು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ನೇಮಿಸಿದ್ದ ಅಡ್‌ ಹಾಕ್‌ ಸಮಿತಿಗೆ ಮರಳಿ ಅಧಿಕಾರ ನೀಡಿದ್ದು, ಅಮಾನತುಗೊಂಡಿರುವ ಫೆಡರೇಷನ್‌ ಟ್ರಯಲ್ಸ್ ನಡೆಸುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದೆ ಎಂದು ದೂರಿದ್ದರು.

ಕೇಂದ್ರ ಸಚಿವಾಲಯವು, ಫೆಡರೇ ಷನ್ ಸ್ವಾಯತ್ತತೆಯಲ್ಲಿ ಹಸ್ತಕ್ಷೇಪ ಮಾಡು ತ್ತಿದ್ದು ಚಾಂಪಿಯನ್‌ಷಿಪ್‌ನಿಂದ ಭಾರತ ತಂಡಗಳನ್ನು ಹಿಂಪಡೆಯುವುದಾಗಿ ಫೆಡರೇಷನ್ ಗುರುವಾರ ವಿಶ್ವ ಕುಸ್ತಿ ಸಂಸ್ಥೆ ಯಾದ ಯುನೈಟೆಡ್‌ ವರ್ಲ್ಡ್‌ ರೆಸ್ಲಿಂಗ್‌ಗೆ (ಯುಡಬ್ಲ್ಯುಡಬ್ಲ್ಯು) ತಿಳಿಸಿತ್ತು.

ಕಳೆದ ವರ್ಷದ ಕೊನೆಯಲ್ಲಿ, ಫೆಡ ರೇಷನ್‌ಗೆ ಹೊಸ ಪದಾಧಿಕಾರಿಗಳ ಆಯ್ಕೆಯ ನಂತರ ಸಚಿವಾಲಯವು ಫೆಡರೇಷನ್‌ಅನ್ನು ಅಮಾನತುಗೊಳಿಸಿದೆ. ಈ ವರ್ಷದ ಫೆಬ್ರುವರಿಯಲ್ಲಿ ಫೆಡರೇಷನ್‌ ಮೇಲಿನ ಅಮಾನತನ್ನು ಯುಡಬ್ಲ್ಯುಡಬ್ಲ್ಯು, ತೆಗೆದುಹಾಕಿದೆ.

‘ಕುಸ್ತಿಪಟುಗಳ ಗುಂಪು ನನ್ನನ್ನು ಭೇಟಿಯಾಗಿ ಪ್ರಸ್ತುತ ಎದುರಾಗಿರುವ ಸಮಸ್ಯೆ ಮತ್ತು ತಮ್ಮ ಮುಂದಿರುವ ಕಳವಳವನ್ನು ತಿಳಿಸಿತು. ನ್ಯಾಯಾಲಯದಲ್ಲಿರುವ ಪ್ರಕರಣ ಅದರ ಪಾಡಿಗೆ ಮುಂದುವರಿಯಲಿದೆ. ಆದರೆ ಕುಸ್ತಿಪಟುಗಳು ವಿಶ್ವ ಕೂಟದಲ್ಲಿ ಭಾಗವಹಿಸಬೇಕು ಎಂದು ನಾನು ನಿರ್ದೇಶನ ನೀಡಿದ್ದೇನೆ. ಅವರಿಗೆ ಅವಕಾಶ ಸಿಗಬೇಕು. ಎಲ್ಲಿ ಮತ್ತು ಯಾರ ಜೊತೆ ಮಾತನಾಡಬೇಕಿತ್ತೊ ಅಲ್ಲಿ ಮಾತನಾಡಿದ್ದೇನೆ’ ಎಂದು ಮಾಂಡವೀಯ ಸುದ್ದಿಗಾರರಿಗೆ ತಿಳಿಸಿದರು.

ಕುಸ್ತಿಪಟುಗಳು, ಕುಸ್ತಿ ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಅವರೊಂದಿಗೆ ಸಚಿವರು ಸುಮಾರು ಒಂದು ಗಂಟೆ ಸಂವಾದ ನಡೆಸಿದರು.

‘ನಾವು ಸಚಿವರ ಜೊತೆ ಸಮಾಲೋಚನೆ ಮಾಡಿದ್ದೇವೆ. ನಮ್ಮ ಮೇಲೆ ನ್ಯಾಯಾಂಗ ನಿಂದನೆ ಆರೋಪ ಹೊರಿಸಿದರೆ, ಆ ಬಗ್ಗೆ ತಾವು ಹೊಣೆ ವಹಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ತಂಡದ ಭಾಗವಹಿಸುವಿಕೆಗೆ ಒಪ್ಪಿಗೆ ನೀಡಿದ್ದಾರೆ’ ಎಂದರು ಸಂಜಯ್ ಸಿಂಗ್ ತಿಳಿಸಿದರು.

ಭಾರತದ ಕುಸ್ತಿಪಟುಗಳು, ನಿಗದಿಯಂತೆ ಭಾನುವಾರ ಬೆಳಿಗ್ಗೆ ಟಿರಾನಾಕ್ಕೆ (ಅಲ್ಬೇನಿಯಾ ರಾಜಧಾನಿ)  ವಿಮಾನ ಹತ್ತಲಿದ್ದಾರೆ. ಅವರಿಗೆ ಟಿಕೆಟ್‌ಗಳನ್ನು ಕಾದಿರಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

ಫೆಡರೇಷನ್ ಮೇಲಿನ ಅಮಾನತನ್ನು ಸರ್ಕಾರ ತೆಗೆದುಹಾಕಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ  ಸಿಂಗ್, ‘ಈ ಬಗ್ಗೆ ಪರಾಮರ್ಶೆ ನಡೆಸುವುದಾಗಿ ಸಚಿವಾಲಯ ತಿಳಿಸಿದೆ. ಇದಕ್ಕೆ ಸುಮಾರು ಒಂದು ತಿಂಗಳು ಹಿಡಿಯಬಹುದು’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.