ADVERTISEMENT

ಪಿಸಿಐ ಅಮಾನತು ಹಿಂಪಡೆದ ಕ್ರೀಡಾ ಸಚಿವಾಲಯ: ಚುನಾವಣೆ ಪ್ರಕ್ರಿಯೆ ಆರಂಭ

ಪಿಟಿಐ
Published 5 ಮಾರ್ಚ್ 2024, 15:27 IST
Last Updated 5 ಮಾರ್ಚ್ 2024, 15:27 IST
ದೇವೇಂದ್ರ ಜಜಾರಿಯಾ
ದೇವೇಂದ್ರ ಜಜಾರಿಯಾ   

ನವದೆಹಲಿ: ಭಾರತ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದ ಬಳಿಕ ಕ್ರೀಡಾ ಸಚಿವಾಲಯ ಮಂಗಳವಾರ ಅದರ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಹಿಂತೆಗೆದುಕೊಂಡಿದೆ. ಮೂರು ಬಾರಿಯ ಪ್ಯಾರಾಲಿಂಪಿಕ್‌  ಪದಕ ವಿಜೇತ ಜಾವೆಲಿನ್ ಥ್ರೂ ಪಟು ದೇವೇಂದ್ರ ಜಜಾರಿಯಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪಿಸಿಐ ಸಜ್ಜಾಗಿದೆ. 

ರಾಷ್ಟ್ರೀಯ ಕ್ರೀಡಾ ಸಂಹಿತೆಯ ಪ್ರಕಾರ ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದಕ್ಕಾಗಿ ಸಚಿವಾಲಯವು ಫೆಬ್ರುವರಿ 2 ರಂದು ಪಿಸಿಐ ಮಾನ್ಯತೆಯನ್ನು ರದ್ದುಗೊಳಿಸಿತ್ತು. 

ಮಾರ್ಚ್ 6 ರಿಂದ 15 ರವರೆಗೆ ಪ್ಯಾರಾ ಶೂಟಿಂಗ್ ವಿಶ್ವಕಪ್ ನಡೆಯಲಿರುವ ಕಾರಣ ಜನವರಿ 31ಕ್ಕಿಂತ ಮೊದಲು ನಡೆಯಬೇಕಿದ್ದ ಚುನಾವಣೆಯನ್ನು ಪಿಸಿಐ ಮಾರ್ಚ್ 28ಕ್ಕೆ ಮುಂದೂಡಿತ್ತು.

ADVERTISEMENT

ಅಮಾನತುಗೊಂಡ ನಂತರ, ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 9 ರಂದು ಚುನಾವಣೆ ನಡೆಸುವುದಾಗಿ ಮಂಡಳಿ ಪ್ರಸ್ತಾಪಿಸಿತು ಮತ್ತು ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭಿಸಿತು. ಹಲವು ಉನ್ನತ ಹುದ್ದೆಗಳನ್ನು ಯಾವುದೇ ಸ್ಪರ್ಧೆಯಿಲ್ಲದೆ ಭರ್ತಿ ಮಾಡಲು ನಿರ್ಧರಿಸಲಾಗಿದೆ

‘ಚುನಾವಣಾ ಪ್ರಕ್ರಿಯೆಯು ನಾಮನಿರ್ದೇಶಿತ ಅಭ್ಯರ್ಥಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಪರಿಗಣಿಸುವ ಹಂತ ತಲುಪಿರುವುದರಿಂದ ಮತ್ತು ಮಾರ್ಚ್ 6-15ರ ವರೆಗೆ ನವದೆಹಲಿಯಲ್ಲಿ ವಿಶ್ವ ಪ್ಯಾರಾ ಶೂಟಿಂಗ್ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಹಾಗಾಗಿ ಪಿಸಿಐ ಅಮಾನತು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಪಿಸಿಐಗೆ ಸಚಿವಾಲಯ ಪತ್ರ ಬರೆದಿದೆ. 

ಕರ್ಣಿಸಿಂಗ್ ರೇಂಜ್‌ನಲ್ಲಿ ನಡೆಯಲಿರುವ ಪ್ಯಾರಾ ಶೂಟಿಂಗ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ 24 ಕೋಟಾ ಸ್ಥಾನಗಳನ್ನು ಪಡೆಯಲು ಇಲ್ಲಿ ಅವಕಾಶ ಸಿಗಲಿದೆ. 52 ದೇಶಗಳ 500ಕ್ಕೂ ಹೆಚ್ಚು ಪಿಸ್ತೂಲ್, ರೈಫಲ್ ಮತ್ತು ಶಾಟ್‌ಗನ್‌ಗಳ ಶೂಟರ್‌ಗಳು ಸ್ಪರ್ಧಿಸುವ ನಿರೀಕ್ಷೆಯಿದೆ. 

ವಿವಿಧ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಬಿಡುಗಡೆ ಮಾಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಜಜಾರಿಯಾ ಏಕೈಕ ಹೆಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.