ಲುಸೈಲ್, ಕತಾರ್: ಭಾರತದ ಶ್ರೀಜಾ ಅಕುಲಾ, ಅಚಂತ ಶರತ್ ಕಮಲ್ ಮತ್ತು ಮಣಿಕಾ ಬಾತ್ರಾ ಅವರು ಡರ್ಬನ್‌ನಲ್ಲಿ ಮೇ 20ರಿಂದ ನಡೆಯಲಿರುವ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್ಸ್ ಫೈನಲ್ಸ್‌ನ ಆಡಲು ಅರ್ಹತೆ ಗಳಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಏಷ್ಯನ್ ಡಬ್ಲ್ಯುಟಿಟಿಸಿ ಕಾಂಟಿನೆಂಟಲ್ ಸ್ಟೇಜ್ ಟೂರ್ನಿಯ 16ರ ಘಟ್ಟದ ಪಂದ್ಯಗಳಲ್ಲಿ ಮಂಗಳವಾರ ಗೆಲುವ ಸಾಧಿಸುವ ಮೂಲಕ ಈ ಮೂವರು ಸಿಂಗಲ್ಸ್ ವಿಭಾಗಗಳಲ್ಲಿ ವಿಶ್ವ ಟೂರ್ನಿಗೆ ಟಿಕೆಟ್ ಗಿಟ್ಟಿಸಿದರು.
ಪ್ರೀಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಶ್ರೀಜಾ 11-2, 5-11, 2-11, 5-11, 13-11, 11-9, 11-8ರಿಂದ ಚೀನಾ ತೈಪೆಯ ಚೆನ್ ಜು ಯು ಅವರನ್ನು ಸೋಲಿಸಿದರೆ, ಶರತ್ 13-11, 11-3, 10-12, 11-7, 11-6ರಿಂದ ಇರಾನ್‌ನ ಅಹಮದಿಯನ್ ಅಮಿನ್ ಸವಾಲು ಮೀರಿದರು. ವಿಶ್ವ ಕ್ರಮಾಂಕದಲ್ಲಿ 35ನೇ ಸ್ಥಾನದಲ್ಲಿರುವ ಮಣಿಕಾ ಬಾತ್ರಾ 13-11, 11-9, 11-6, 11-8ರಿಂದ ಹಾಂಗ್‌ಕಾಂಗ್‌ನ ಝು ಚೆಂಗ್‌ಜು ಅವರನ್ನು ಪರಾಭವಗೊಳಿಸಿದರು.
ಮಿಶ್ರ ಡಬಲ್ಸ್‌ನಲ್ಲಿ ಮಣಿಕಾ ಮತ್ತು ಜಿ. ಸತ್ಯನ್ ಕೂಡ ಅರ್ಹತೆ ಗಳಿಸಿದರು. ಈ ಜೋಡಿಯು 11-9, 12-10, 11-7, 5-11, 11-7ರಿಂದ ಜಪಾನ್‌ನ ಹಿರೊಟೊ ಶಿನೊಜುಕಾ ಮತ್ತು ಮಿಯುಯು ಅವರನ್ನು ಸೋಲಿಸಿತು. ಪುರುಷರ ಡಬಲ್ಸ್‌ನಲ್ಲಿ ಸತ್ಯನ್– ಶರತ್ 11-5, 11-0, 11-9, 11-8ರಿಂದ ಕತಾರ್‌ನ ಮೊಹಮ್ಮದ್ ಅಬ್ದುಲ್ ವಹಾಬ್– ಖಲೀಲ್ ಅಲ್ ಮೊಹನ್ನಂದಿ ಅವರನ್ನು ಮಣಿಸಿ ವಿಶ್ವ ಟಿಕೆಟ್ ಪಡೆಯಿತು.
ಸತ್ಯನ್ ಅವರು ಸಿಂಗಲ್ಸ್ ವಿಭಾಗದಲ್ಲಿ ಅರ್ಹತೆ ಗಿಟ್ಟಿಸಿಲ್ಲ. ಆದರೆ ವಿಶ್ವ ರ‍್ಯಾಂಕಿಂಗ್ ಆಧಾರದಲ್ಲಿ ಅರ್ಹತೆ ಪಡೆಯುವ ಅವಕಾಶ ಅವರಿಗೆ ಇದೆ. ಈ ಕುರಿತು ಪ್ರಕಟಣೆಗೆ ಅವರು ಕಾಯಬೇಕಿದೆ.
ಮಹಿಳಾ ಡಬಲ್ಸ್‌ನಲ್ಲಿ ರೀತ್ ರಿಷ್ಯಾ– ಶ್ರೀಜಾ ಕೂಡ ಅರ್ಹತೆ ಪಡೆದಿದ್ದಾರೆ. ಆದಾಗ್ಯೂ ಸಿಂಗಲ್ಸ್‌ನಲ್ಲಿ ಅವರು ಅರ್ಹತೆ ಪಡೆಯದ ಕಾರಣ ಅವರ ಡಬಲ್ಸ್ ಸ್ಥಾನ ಸದ್ಯಕ್ಕೆ ಖಚಿತಪಟ್ಟಿಲ್ಲ. ಇನ್ನೊಂದು ಜೋಡಿ ಮಣಿಕಾ ಮತ್ತು ಕರ್ನಾಟಕದ ಅರ್ಚನಾ ಕಾಮತ್ ಅವರು ಉತ್ತಮ ರ‍್ಯಾಂಕಿಂಗ್ ಆಧಾರದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.