ADVERTISEMENT

ಎಫ್‌ಐಎಚ್‌ ಪ್ರೊ ಹಾಕಿ: ಭಾರತಕ್ಕೆ ಮಣಿದ ಬೆಲ್ಜಿಯಂ

ಮಹಿಳಾ ತಂಡಕ್ಕೆ ಸೋಲು

ಪಿಟಿಐ
Published 11 ಜೂನ್ 2022, 19:32 IST
Last Updated 11 ಜೂನ್ 2022, 19:32 IST
ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಶಂಷೇರ್‌ ಸಿಂಗ್‌ ಭಾರತಕ್ಕೆ ಮೊದಲ ಗೋಲು ತಂದಿತ್ತ ಕ್ಷಣ –ಎಎಫ್‌ಪಿ ಚಿತ್ರ
ಬೆಲ್ಜಿಯಂ ವಿರುದ್ಧದ ಪಂದ್ಯದಲ್ಲಿ ಶಂಷೇರ್‌ ಸಿಂಗ್‌ ಭಾರತಕ್ಕೆ ಮೊದಲ ಗೋಲು ತಂದಿತ್ತ ಕ್ಷಣ –ಎಎಫ್‌ಪಿ ಚಿತ್ರ   

ಆ್ಯಂಟ್ವರ್ಪ್, ಬೆಲ್ಜಿಯಂ: ಗೋಲ್‌ಕೀಪರ್‌ ಪಿ.ಆರ್.ಶ್ರೀಜೇಶ್‌ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತ ತಂಡ ಎಫ್‌ಐಎಚ್‌ ಪ್ರೊ ಹಾಕಿ ಲೀಗ್‌ನ ಪಂದ್ಯದಲ್ಲಿ ಬೆಲ್ಜಿಯಂ ವಿರುದ್ಧ ಜಯ ಸಾಧಿಸಿತು.

ಶನಿವಾರ ನಡೆದ ಮೊದಲ ಲೆಗ್‌ ಪಂದ್ಯದಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ನಲ್ಲಿ 5–4 ರಲ್ಲಿ ಗೆಲುವು ಪಡೆಯಿತು. ನಿಗದಿತ ಅವಧಿಯ ಆಟದಲ್ಲಿ ಉಭಯ ತಂಡಗಳು 3–3 ಗೋಲುಗಳ ಡ್ರಾ ಸಾಧಿಸಿದ್ದವು.

ಪೆನಾಲ್ಟಿ ಶೂಟೌಟ್‌ನಲ್ಲಿ ಎರಡೂ ತಂಡಗಳು 4–4 ರಲ್ಲಿ ಸಮಬಲ ಸಾಧಿಸಿತು. ಭಾರತದ ಕೊನೆಯ ಅವಕಾಶದಲ್ಲಿ ಆಕಾಶ್‌ದೀಪ್‌ ಸಿಂಗ್‌ ಗೋಲು ಗಳಿಸಿ 5–4 ಮುನ್ನಡೆ ತಂದಿತ್ತರು. ಬೆಲ್ಜಿಯಂ ತಂಡದ ಅಲೆಕ್ಸಾಂಡರ್‌ ಹೆಂಡ್ರಿಕ್ಸ್‌ ಅವರ ಕೊನೆಯ ಪ್ರಯತ್ನವನ್ನು ಶ್ರೀಜೇಶ್‌ ತಡೆದು ಭಾರತದ ಗೆಲುವಿಗೆ ಕಾರಣರಾದರು.

ADVERTISEMENT

ನಿಗದಿತ ಅವಧಿಯಲ್ಲಿ ಪಂದ್ಯ 3–3 ರಲ್ಲಿ ಸಮಬಲದಲ್ಲಿ ಕೊನೆಗೊಂಡಿತು. 17ನೇ ನಿಮಿಷದಲ್ಲಿ ಶಂಷೇರ್‌ ಸಿಂಗ್‌ ಭಾರತಕ್ಕೆ ಮುನ್ನಡೆ ತಂದಿತ್ತರು.

ಆದರೆ ಆರಂಭಿಕ ಮುನ್ನಡೆಯ ಲಾಭ ವನ್ನು ಸಮರ್ಥವಾಗಿ ಬಳಸಿಕೊಳ್ಳಲು ಭಾರತ ವಿಫಲವಾಯಿತು. ಸೆಡ್ರಿಕ್‌ ಚಾರ್ಲಿಯರ್‌ (20ನೇ ನಿ.) ಆತಿಥೇಯ ತಂಡಕ್ಕೆ ಸಮಬಲ ತಂದಿತ್ತರೆ, ಸೈಮನ್‌ ಗೊನಾರ್ಡ್‌ (35ನೇ ನಿ.) ಮುನ್ನಡೆ ತಂದುಕೊಟ್ಟರು.

50ನೇ ನಿಮಿಷದಲ್ಲಿ ನಿಕೊಲಸ್‌ ಡಿ ಕೆರ್ಪೆಲ್‌ ಅವರ ಗೋಲಿನಿಂದ ಬೆಲ್ಜಿಯಂ ಮುನ್ನಡೆಯನ್ನು 3–1ಕ್ಕೆ ಹೆಚ್ಚಿಸಿಕೊಂಡಿತು. ಒತ್ತಡಕ್ಕೆ ಒಳಗಾದರೂ ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ಅಮೋಘ ಮರುಹೋರಾಟ ನಡೆಸಿತು. ಹರ್ಮನ್‌ಪ್ರೀತ್‌ ಸಿಂಗ್‌ (51ನೇ ನಿ.) ಮತ್ತು ಜರ್ಮನ್‌ಪ್ರೀತ್‌ ಸಿಂಗ್‌ (57) ಅವರ ನೆರವಿನಿಂದ ಸಮಬಲ ಸಾಧಿಸಿತು.

ಮಹಿಳಾ ತಂಡಕ್ಕೆ ನಿರಾಸೆ: ಇದಕ್ಕೂ ಮುನ್ನ ನಡೆದ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಭಾರತ 1–2 ಗೋಲುಗಳಿಂದ ಬೆಲ್ಜಿಯಂ ಎದುರು ಸೋಲು ಅನುಭವಿಸಿತು.

ನೆಲೆನ್‌ ಬಾರ್ಬರಾ 3ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಮೊದಲು ಗೋಲು ಗಳಿಸಿದರೆ, 35ನೇ ನಿಮಿಷದಲ್ಲಿ ಆ್ಯಂಡ್ರೆ ಬಾಲೆಂಜೈನ್ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಮರುಹೋರಾಟ ನಡೆಸಿದ ಭಾರತ ತಂಡಕ್ಕೆ 48ನೇ ನಿಮಿಷದಲ್ಲಿ ಲಾಲ್‌ರೆಮ್ಸಿಯಾಮಿ ಗೋಲು ತಂದಿತ್ತರು. ಕೊನೆಯ ಕ್ವಾರ್ಟರ್‌ನಲ್ಲಿ ಸಮಬಲದ ಗೋಲಿಗಾಗಿ ಮೇಲಿಂದ ಮೇಲೆ ಪ್ರಯತ್ನ ನಡೆಸಿದರೂ ಯಶ ಕಾಣಲಿಲ್ಲ.

ರಾಣಿ ಸಾಧನೆ: ಭಾರತ ತಂಡದ ಹಿರಿಯ ಆಟಗಾರ್ತಿ ರಾಣಿ ರಾಂಪಾಲ್‌ ಅವರಿಗೆ ಇದು 250ನೇ ಅಂತರರಾಷ್ಟ್ರೀಯ ಪಂದ್ಯವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.