ADVERTISEMENT

ಪ್ಯಾರಾ ವಿಶ್ವಕಪ್‌ ಶೂಟಿಂಗ್‌: ಕಂಚು ಗೆದ್ದ ಹುಬ್ಬಳ್ಳಿಯ ಶ್ರೀಹರ್ಷ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 8:41 IST
Last Updated 23 ಮಾರ್ಚ್ 2021, 8:41 IST
ಕಂಚಿನ ಪದಕದ ಜೊತೆ ಹುಬ್ಬಳ್ಳಿಯ ಶ್ರೀಹರ್ಷ ದೇವರೆಡ್ಡಿ
ಕಂಚಿನ ಪದಕದ ಜೊತೆ ಹುಬ್ಬಳ್ಳಿಯ ಶ್ರೀಹರ್ಷ ದೇವರೆಡ್ಡಿ   

ಹುಬ್ಬಳ್ಳಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ಅಲ್ ಐನ್‌ನಲ್ಲಿ ನಡೆಯುತ್ತಿರುವ ಪ್ಯಾರಾ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶ್ರೀಹರ್ಷ ಆರ್‌. ದೇವರೆಡ್ಡಿ ಕಂಚಿನ ಪದಕ ಜಯಿಸಿದ್ದಾರೆ.

ಮಂಗಳವಾರ ಅವರು 10 ಮೀಟರ್‌ ಏರ್‌ ರೈಫಲ್‌ ಸ್ಟ್ಯಾಂಡಿಂಗ್‌ನ ಆರ್‌–4 ಎಸ್‌ಎಚ್‌ 2 ವಿಭಾಗದಲ್ಲಿ ಒಟ್ಟು 230.8 ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮಾಡಿದರು. ಮೊದಲ ಎರಡು ಸ್ಥಾನಗಳು ಕ್ರಮವಾಗಿ ಇಟಲಿ ಹಾಗೂ ಉಕ್ರೇನ್‌ ಶೂಟರ್‌ಗಳ ಪಾಲಾದವು.

ಇದಕ್ಕೂ ಮೊದಲು ನಡೆದ ಪ್ರಾಥಮಿಕ ಸುತ್ತಿನಲ್ಲಿ ಮೊದಲ ಎಂಟು ಸ್ಥಾನ ಪಡೆದ ಶೂಟರ್‌ಗಳು ಫೈನಲ್‌ಗೆ ಅರ್ಹತೆ ಪಡೆದುಕೊಂಡರು. ಶ್ರೀಹರ್ಷ ಪ್ರಾಥಮಿಕ ಸುತ್ತಿನಲ್ಲಿ ಒಟ್ಟು 629.6 ಅಂಕಗಳನ್ನು ಗಳಿಸಿ ನಾಲ್ಕನೆ ಸ್ಥಾನ ಗಳಿಸಿ ಪದಕದ ಸುತ್ತಿಗೆ ಆಯ್ಕೆಯಾಗಿದ್ದರು. ಒಟ್ಟು ಆರು ಅವಕಾಶಗಳ ಪ್ರಾಥಮಿಕ ಸುತ್ತಿನಲ್ಲಿ ಶ್ರೀಹರ್ಷ ಕ್ರಮವಾಗಿ 104.6, 103.7, 105, 105.6, 104.9 ಮತ್ತು 105.8 ಅಂಕಗಳನ್ನು ಕಲೆಹಾಕಿದರು.

ADVERTISEMENT

ಶ್ರೀಹರ್ಷ 2019ರ ಫೆಬ್ರುವರಿಯಲ್ಲಿ ಶಾರ್ಜಾದಲ್ಲಿ ನಡೆದಿದ್ದ ಐವಾಸ್‌ ಪ್ಯಾರಾ ಕ್ರೀಡಾಕೂಟದ ಶೂಟಿಂಗ್‌ ಲೆವಲ್‌–3 ವಿಶ್ವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಶೂಟಿಂಗ್‌ ಕಲಿಕೆಯ ಆರಂಭದ ಎರಡು ವರ್ಷ ಅವರು ಇಲ್ಲಿನ ಹುಬ್ಬಳ್ಳಿ ಸ್ಪೋರ್ಟ್ಸ್‌ ಶೂಟಿಂಗ್‌ ಅಕಾಡೆಮಿಯಲ್ಲಿ ರವಿಚಂದ್ರ ಬಾಲೆಹೊಸೂರ ಬಳಿ ತರಬೇತಿ ಪಡೆದಿದ್ದರು.

ಬಲವಿಲ್ಲದ ಬೆರಳಿನಿಂದ ಗೆದ್ದ ಪದಕ: ಅಪಘಾತದಲ್ಲಿ ಕೈ ಹಾಗೂ ಕಾಲುಗಳ ಸ್ವಾಧೀನ ಕಳೆದುಕೊಂಡು ರೈಫಲ್‌ ಟ್ರಿಗರ್‌ ಒತ್ತಲು ಕೂಡ ಕಷ್ಟಪಡುವ ಶ್ರೀಹರ್ಷ ಶಕ್ತಿಯೇ ಇಲ್ಲದ ‌‌‌ಬೆರಳಿನಿಂದ ಪದಕ ಜಯಿಸಿದ್ದು ವಿಶೇಷ.

ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಹರ್ಷ ಅವರಿಗೆ 2013ರಲ್ಲಿ ಸಂಭವಿಸಿದ ಅಪಘಾತದಲ್ಲಿ ಬೆನ್ನುಹುರಿಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಎರಡೂ ಕಾಲು ಹಾಗೂ ಕೈಗಳ ಶಕ್ತಿ ಕಳೆದುಕೊಂಡರು. ಕೈ ಬೆರಳುಗಳಲ್ಲಿಯೂ ಸ್ವಾಧೀನವಿಲ್ಲ.

2017 ಮತ್ತು 2018ರಲ್ಲಿ ರಾಜ್ಯ ರೈಫಲ್‌ ಸಂಸ್ಥೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆಯ 10 ಮೀ. ಏರ್‌ ರೈಫಲ್‌ನಲ್ಲಿ ಚಿನ್ನದ ಪದಕ ಗಳಿಸಿದ್ದರು. 2019ರ ದಸರಾ ಕ್ರೀಡಾಕೂಟದ ಸಿ.ಎಂ. ಕಪ್‌ ಮತ್ತು 2018ರಲ್ಲಿ ಚೆನ್ನೈನಲ್ಲಿ ನಡೆದ ಜಿ.ವಿ. ಮೌಲಾಂಕರ್‌ ದಕ್ಷಿಣ ವಲಯ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೇರಿದಂತೆ ಹಲವು ಟೂರ್ನಿಗಳಲ್ಲಿ ಪದಕಗಳನ್ನು ಜಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.