ADVERTISEMENT

ಡೆನ್ಮಾರ್ಕ್ ಓಪನ್‌ ಬ್ಯಾಡ್ಮಿಂಟನ್‌; ಶ್ರೀಕಾಂತ್‌, ಲಿನ್ ಡ್ಯಾನ್‌ ಕದನ ಕುತೂಹಲ

ಅಶ್ವಿನಿ–ಸಿಕ್ಕಿ ರೆಡ್ಡಿ ಜೋಡಿಗೆ ಗೆಲುವು

ಪಿಟಿಐ
Published 17 ಅಕ್ಟೋಬರ್ 2018, 13:57 IST
Last Updated 17 ಅಕ್ಟೋಬರ್ 2018, 13:57 IST
ಕಿದಂಬಿ ಶ್ರೀಕಾಂತ್‌
ಕಿದಂಬಿ ಶ್ರೀಕಾಂತ್‌   

ಒಡೆನ್ಸೆ, ಡೆನ್ಮಾರ್ಕ್‌: ಭಾರತದ ಕಿದಂಬಿ ಶ್ರೀಕಾಂತ್‌ ಅವರು ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದರು. ಈ ಗೆಲುವಿನೊಂದಿಗೆ ಶ್ರೀಕಾಂತ್‌ ಮತ್ತು ಚೀನಾದ ಲೆನ್ ಡ್ಯಾನ್ ಅವರ ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು ಕುತೂಹಲ ಕೆರಳಿದೆ.

ಬುಧವಾರ ನಡೆದ ಪಂದ್ಯದಲ್ಲಿ ಶ್ರೀಕಾಂತ್‌, ಡೆನ್ಮಾರ್ಕ್‌ನ ಹ್ಯಾನ್ಸ್‌ ಕ್ರಿಸ್ಟಿಯನ್‌ ಸಾಲ್ಬರ್ಗ್‌ ವಿಟಿಂಗಸ್‌ ಎದುರು 21–16, 21–10ರಿಂದ ಗೆದ್ದರು. ಪಂದ್ಯ 35 ನಿಮಿಷದಲ್ಲಿ ಮುಕ್ತಾಯಗೊಂಡಿತು.

ಚೀನಾದ ಲೆನ್‌ ಡ್ಯಾನ್‌ ಮತ್ತು ಶ್ರೀಕಾಂತ್‌ ಈ ಹಿಂದೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದು ಮೂರು ಪಂದ್ಯಗಳಲ್ಲಿ ಶ್ರೀಕಾಂತ್ ಸೋತಿದ್ದಾರೆ. 2014ರ ಚೀನಾ ಓಪನ್ ಟೂರ್ನಿಯಲ್ಲಿ ಮಾತ್ರ ಲೆನ್‌ ಡ್ಯಾನ್‌ ವಿರುದ್ಧ ಶ್ರೀಕಾಂತ್‌ ಗೆದ್ದಿದ್ದರು.

ADVERTISEMENT

ಈಗ ಅಂತರರಾಷ್ಟ್ರೀಯ ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನ ಹೊಂದಿರುವ ಲೆನ್ ಡ್ಯಾನ್‌ ಆರನೇ ಸ್ಥಾನದಲ್ಲಿರುವ ಶ್ರೀಕಾಂತ್‌ ಅವರ ಸವಾಲನ್ನು ಮೆಟ್ಟಿ ನಿಲ್ಲುವರೇ ಎಂಬ ಕುತೂಹಲಕ್ಕೆ ಗುರುವಾರ ಉತ್ತರ ಸಿಗಲಿದೆ.

ಅಶ್ವಿನಿ–ಸಿಕ್ಕಿ ರೆಡ್ಡಿಗೆ ಗೆಲುವು: ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅಮೆರಿಕದ ಏರಿಯೆಲ್‌ ಲೀ ಮತ್ತು ಸಿಡ್ನಿ ಲೀ ಜೋಡಿಯನ್ನು 21–7, 21–11ರಿಂದ ಮಣಿಸಿದರು. ಆದರೆ ಮೇಘನಾ ಜಕ್ಕಂಪುಡಿ ಮತ್ತು ಎಸ್‌.ರಾಮ್‌ ಪೂರ್ವಿಶಾ ಜೋಡಿ ಸ್ವೀಡನ್‌ನ ಎಮ್ಮಾ ಕಾರ್ಲೋಸ್ ಮತ್ತು ಜೊಹನ್ನಾ ಮಗ್ನುಸನ್ ಅವರಿಗೆ 17–21, 11–21ರಿಂದ ಮಣಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.