ನಾನ್‌ಜಿಂಗ್, ಚೀನಾ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಿದಂಬಿ ಶ್ರೀಕಾಂತ್, ಗೆಲುವಿನ ಓಟ ಮುಂದುವರಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅವರು ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಬುಧವಾರ ನಡೆದ ಎರಡನೆ ಸುತ್ತಿನ ಹೋರಾಟದಲ್ಲಿ ಶ್ರೀಕಾಂತ್ 21–15, 12–21, 21–14ರಲ್ಲಿ ಸ್ಪೇನ್‌ನ ಪ್ಯಾಬ್ಲೊ ಅಬಿಯಾನ್ ವಿರುದ್ಧ ಗೆದ್ದರು. ಈ ಹೋರಾಟ 62 ನಿಮಿಷ ನಡೆಯಿತು.
ಮೊದಲ ಗೇಮ್‌ನಲ್ಲಿ 2–4, 6–8ರಿಂದ ಹಿನ್ನಡೆ ಕಂಡಿದ್ದ ಐದನೆ ಶ್ರೇಯಾಂಕದ ಆಟಗಾರ ಶ್ರೀಕಾಂತ್, ನಂತರ ಪುಟಿದೆದ್ದರು. ಬಲಿಷ್ಠ ಕ್ರಾಸ್‌ಕೋರ್ಟ್ ಸ್ಮ್ಯಾಷ್‌ಗಳನ್ನು ಸಿಡಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ಅವರು 16–13ರ ಮುನ್ನಡೆ ತಮ್ಮದಾಗಿಸಿಕೊಂಡರು. ನಂತರವೂ ಶ್ರೀಕಾಂತ್ ಅಬ್ಬರಿಸಿದರು. ಸತತ ನಾಲ್ಕು ಪಾಯಿಂಟ್ಸ್ ಗಳಿಸಿ ಮುನ್ನಡೆಯನ್ನು 20–13ಕ್ಕೆ ಹೆಚ್ಚಿಸಿಕೊಂಡ ಅವರು ಜಯದ ಹಾದಿ ಸುಗಮ ಮಾಡಿಕೊಂಡರು. ಈ ಹಂತದಲ್ಲಿ ಎರಡು ಪಾಯಿಂಟ್ಸ್ ಕಲೆಹಾಕಿದ ಪ್ಯಾಬ್ಲೊ ಹಿನ್ನಡೆಯನ್ನು 15–20ಕ್ಕೆ ತಗ್ಗಿಸಿಕೊಂಡರು. ನಂತರ ಚುರುಕಾಗಿ ಒಂದು ಪಾಯಿಂಟ್ ಗಳಿಸಿದ ಶ್ರೀಕಾಂತ್ ಸಂಭ್ರಮಿಸಿದರು.
ಆರಂಭಿಕ ನಿರಾಸೆಯಿಂದ ಪ್ಯಾಬ್ಲೊ ಎದೆಗುಂದಲಿಲ್ಲ. ಎರಡನೆ ಗೇಮ್‌ನಲ್ಲಿ ಪರಿಣಾಮಕಾರಿ ಆಟ ಆಡಿದ ಅವರು ಭಾರತದ ಆಟಗಾರನನ್ನು ಕಂಗೆಡಿಸಿದರು.
ಹೀಗಾಗಿ ಮೂರನೆ ಗೇಮ್‌ನ ಆಟ ಕುತೂಹಲದ ಗಣಿಯಾಗಿತ್ತು. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಸ್ಪೇನ್‌ನ ಆಟಗಾರ 11–9ರಿಂದ ಮುಂದಿದ್ದರು. ಇದರಿಂದ ವಿಚಲಿತರಾಗದ ಶ್ರೀಕಾಂತ್ ಚುರುಕಿನ ಡ್ರಾಪ್ ಮತ್ತು ಬೇಸ್‌ಲೈನ್ ಹೊಡೆತಗಳ ಮೂಲಕ ಪಾಯಿಂಟ್ಸ್ ಸಂಗ್ರಹಿಸಿ ಖುಷಿಯ ಕಡಲಲ್ಲಿ ತೇಲಿದರು.
ಹದಿನಾರರ ಹಂತದಲ್ಲಿ ಶ್ರೀಕಾಂತ್, ಮಲೇಷ್ಯಾದ ಡರೆನ್ ಲೀವ್ ವಿರುದ್ಧ ಸೆಣಸಲಿದ್ದಾರೆ.
ಪ್ರಣಯ್‌ಗೆ ನಿರಾಸೆ: ಎರಡನೆ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಎಚ್.ಎಸ್.ಪ್ರಣಯ್ 21–8, 16–21, 15–21ರಲ್ಲಿ ಬ್ರೆಜಿಲ್‌ನ ಯಗೊರ್ ಕೊಯೆಲ್ಹೊ ವಿರುದ್ಧ ಸೋತರು.
ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಭರವಸೆಯಾಗಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು.
ಅಶ್ವಿನಿ ಮತ್ತು ಸಿಕ್ಕಿ 14–21, 15–21ರಲ್ಲಿ ಜಪಾನ್‌ನ ಯೂಕಿ ಫುಕುಶಿಮಾ ಮತ್ತು ಸಯಾಕ ಹಿರೋಟಾ ಎದುರು ಪರಾಭವಗೊಂಡರು.
ಪುರುಷರ ಡಬಲ್ಸ್‌ನ ಎರಡನೆ ಸುತ್ತಿನ ಪೈಪೋಟಿಯಲ್ಲಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 18–21, 21–15, 16–21ರಲ್ಲಿ ಡೆನ್ಮಾರ್ಕ್‌ನ ಕಿಮ್ ಆ್ಯಸ್ಟ್ರಪ್ ಮತ್ತು ಆ್ಯಂಡ್ರೆಸ್ ಸ್ಕಾರಪ್ ರಾಸ್‌ಮಸೆನ್ ವಿರುದ್ಧ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.