ADVERTISEMENT

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ: ಪ್ರಶಸ್ತಿಯ ಮೇಲೆ ಸೈನಾ ಕಣ್ಣು

ಹಿಂದೆ ಸರಿದ ಶ್ರೀಕಾಂತ್‌

ಪಿಟಿಐ
Published 24 ಸೆಪ್ಟೆಂಬರ್ 2018, 12:31 IST
Last Updated 24 ಸೆಪ್ಟೆಂಬರ್ 2018, 12:31 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ಸೋಲ್‌: ಭಾರತದ ಸೈನಾ ನೆಹ್ವಾಲ್‌ ಅವರು ಕೊರಿಯಾ ಓಪನ್‌ ವಿಶ್ವ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

ಸಿಂಗಲ್ಸ್‌ ವಿಭಾಗಗಳಲ್ಲಿ ಭಾರತದ ಭರವಸೆಯಾಗಿದ್ದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಟೂರ್ನಿಯಲ್ಲಿ ಆಡದಿರಲು ತೀರ್ಮಾನಿಸಿದ್ದಾರೆ.

ಮಂಗಳವಾರ ನಡೆಯುವ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಸೈನಾ, ದಕ್ಷಿಣ ಕೊರಿಯಾದ ಕಿಮ್‌ ಹ್ಯೂ ಮಿನ್‌ ವಿರುದ್ಧ ಸೆಣಸಲಿದ್ದಾರೆ.

ADVERTISEMENT

ಈ ಬಾರಿಯ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ, ಹೋದ ವಾರ ನಡೆದಿದ್ದ ಚೀನಾ ಓಪನ್‌ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲೇ ನಿರಾಸೆ ಕಂಡಿದ್ದರು.

ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ, ಕಿಮ್‌ ಹ್ಯೂ ವಿರುದ್ಧ ಸುಲಭವಾಗಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ವೈಷ್ಣವಿ ರೆಡ್ಡಿ ಜಕ್ಕಾ ಅವರೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸುವ ತವಕದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ವೈಷ್ಣವಿಗೆ ಅಮೆರಿಕದ ಆರನೇ ಶ್ರೇಯಾಂಕದ ಆಟಗಾರ್ತಿ ಬೆಯಿವೆನ್‌ ಜಾಂಗ್‌ ಸವಾಲು ಎದುರಾಗಲಿದೆ.

ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮಾ ಭಾರತದ ಭರವಸೆಯಾಗಿದ್ದಾರೆ.

ಸಮೀರ್‌ ಅವರು ಸ್ವಿಟ್ಜರ್‌ಲೆಂಡ್‌ ಮತ್ತು ಹೈದರಾಬಾದ್‌ ಓಪನ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು. ಗಾಯದಿಂದ ಗುಣಮುಖವಾಗಿರುವ ಭಾರತದ ಆಟಗಾರ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಆ್ಯಂಡ್ರೆಸ್‌ ಆ್ಯಂಟೊನ್‌ಸನ್‌ ವಿರುದ್ಧ ಹೋರಾಡಲಿದ್ದಾರೆ.

ಅಜಯ್‌ ಜಯರಾಮ್‌, ವೈದೇಹಿ ಚೌಧರಿ ಮತ್ತು ಮಗ್ದಾ ಆಗ್ರೇಯ ಅವರು ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಪೈಪೋಟಿ ನಡೆಸಲಿದ್ದಾರೆ.

ಮೊದಲ ಸುತ್ತಿನಲ್ಲಿ ಜಯರಾಮ್‌, ಚೀನಾದ ಜಾವೊ ಜುನ್‌ಪೆಂಗ್‌ ವಿರುದ್ಧ ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.