ADVERTISEMENT

ರಾಯ್ ಬರೇಲಿ ಹಾಕಿ ಕ್ರೀಡಾಂಗಣ ಮರು ನಾಮಕರಣ: ರಾಣಿ ರಾಂಪಾಲ್ ಹೆಸರು

ಪಿಟಿಐ
Published 21 ಮಾರ್ಚ್ 2023, 5:39 IST
Last Updated 21 ಮಾರ್ಚ್ 2023, 5:39 IST
   

ನವದೆಹಲಿ: ರಾಯ್ ಬರೇಲಿ ಹಾಕಿ ಕ್ರೀಡಾಂಗಣವನ್ನು ಭಾರತ ಹಾಕಿ ತಂಡದ ಆಟಗಾರ್ತಿ ರಾಣಿ ರಾಂಪಾಲ್ ಅವರ ಹೆಸರಿನೊಂದಿಗೆ ಮರು ನಾಮಕರಣ ಮಾಡಲಾಗಿದ್ದು, ಇದರೊಂದಿಗೆ ಹಾಕಿ ಕ್ರೀಡೆಯಲ್ಲಿ ತಮ್ಮ ಹೆಸರಿನ ಕ್ರೀಡಾಂಗಣವನ್ನು ಹೊಂದಿರುವ ದೇಶದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ರಾಣಿ ಪಾತ್ರವಾಗಿದ್ದಾರೆ.

ಎಂಸಿಎಫ್ ರಾಯ್ ಬರೇಲಿ ಹಾಕಿ ಕ್ರೀಡಾಂಗಣವನ್ನು ‘ರಾಣಿ ಗರ್ಲ್ಸ್ ಹಾಕಿ ಟರ್ಫ್’ ಎಂದು ಮರುನಾಮಕರಣ ಮಾಡಲಾಗಿದೆ.

ರಾಣಿ, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕ್ರೀಡಾಂಗಣದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆಟಗಾರರೊಂದಿಗೆ ಸಂವಹನ ನಡೆಸುತ್ತಿರುವ ಮತ್ತು ಇತರ ಸಿಬ್ಬಂದಿ ಸದಸ್ಯರೊಂದಿಗೆ ಕ್ರೀಡಾಂಗಣವನ್ನು ಉದ್ಘಾಟಿಸುತ್ತಿರುವ ಚಿತ್ರವನ್ನು ಶೇರ್‌ ಮಾಡಿದ್ದಾರೆ.

ADVERTISEMENT

‘ಹಾಕಿಯಲ್ಲಿ ನನ್ನ ಕೊಡುಗೆಯನ್ನು ಗೌರವಿಸಲು ಎಂಸಿಎಫ್ ರಾಯ್‌ ಬರೇಲಿ ಹಾಕಿ ಕ್ರೀಡಾಂಗಣವನ್ನು ರಾಣಿ ಗರ್ಲ್ಸ್ ಹಾಕಿ ಟರ್ಫ್ ಎಂದು ಮರು ನಾಮಕರಣ ಮಾಡಿದೆ. ಈ ಸಂತೋಷ ಮತ್ತು ಇದಕ್ಕೆ ಕೃತಜ್ಞತೆ ಸಲ್ಲಿಸಲು ಪದಗಳು ಸಿಗುತ್ತಿಲ್ಲ’ ಎಂದು ರಾಣಿ ಟ್ವೀಟ್‌ ಮಾಡಿದ್ದಾರೆ.

‘ನನ್ನದೇ ಹೆಸರಿನಲ್ಲಿ ಒಂದು ಕ್ರೀಡಾಂಗಣವನ್ನು ಹೊಂದಿರುವ ದೇಶದ ಮೊದಲ ಮಹಿಳಾ ಹಾಕಿ ಆಟಗಾರ್ತಿಯಾಗಿರುವುದು ನನಗೆ ಹೆಮ್ಮೆಯ ಮತ್ತು ಭಾವನಾತ್ಮಕ ಕ್ಷಣವಾಗಿದೆ. ನಾನು ಇದನ್ನು ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅರ್ಪಿಸುತ್ತೇನೆ ಮತ್ತು ಇದು ಮಹಿಳಾ ಆಟಗಾರ್ತಿಯರ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ರಾಣಿ ಅವರು 22 ಸದಸ್ಯರ ತಂಡದಲ್ಲಿ ಸೇರ್ಪಡೆಗೊಂಡು ಭಾರತ ತಂಡಕ್ಕೆ ಮರಳಿದ್ದರು.

ಅವರು ಎಫ್‌ಐಎಚ್ ಮಹಿಳಾ ಹಾಕಿ ಪ್ರೊ ಲೀಗ್ 2021-22ರಲ್ಲಿ ಬೆಲ್ಜಿಯಂ ವಿರುದ್ಧ ಕೊನೆಯ ಬಾರಿ ಆಡಿದ್ದರು. 28 ವರ್ಷ ವಯಸ್ಸಿನ ರಾಣಿ, ಟೋಕಿಯೊ ಒಲಿಂಪಿಕ್ಸ್‌ ವೇಳೆ ಗಾಯಗೊಂಡಿದ್ದರು. ಪರಿಣಾಮವಾಗಿ ವಿಶ್ವಕಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ 2022 ತಂಡದಿಂದ ಹೊರಗುಳಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.