ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಹಾಗೂ ಸ್ಟಾರ್ ಇಂಡಿಯಾ ಬಾಕ್ಸರ್ ಮಾಂಗ್ಟೆ ಚುಂಗ್ನೈಜಾಂಗ್ ಮೇರಿ ಕೋಮ್ ಬಾಕ್ಸಿಂಗ್ಗೆ ನಿವೃತ್ತಿ ಘೋಷಿಸಿದ್ದಾರೆ ಎಂಬ ವರದಿಗಳನ್ನು ಗುರುವಾರ ತಳ್ಳಿಹಾಕಿದ್ದಾರೆ.
ವಯಸ್ಸಿನ ಮಿತಿಯ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿತ್ತು. ಆದರೆ ನಿವೃತ್ತಿ ಬಗ್ಗೆ ಯಾವುದೇ ಔಪಚಾರಿಕ ಘೋಷಣೆಯನ್ನು ಮಾಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ನಾನು ಇನ್ನೂ ನಿವೃತ್ತಿ ಘೋಷಿಸಿಲ್ಲ. ನಾನು ನಿವೃತ್ತಿ ಹೊಂದಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಬರುತ್ತೇನೆ. ನಾನು ನಿವೃತ್ತಿ ಘೋಷಿಸಿದ್ದೇನೆ ಎಂದು ಕೆಲವು ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿದೆ. ಇದು ನಿಜವಲ್ಲ' ಎಂದು ಸ್ಪಷ್ಟನೆ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಜನವರಿ 24ರಂದು ಅಸ್ಸಾಂನ ದಿಬ್ರುಗಢ ಸಮೀಪದ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುವಾಗ ‘ನನಗೆ ಇನ್ನೂ ಕ್ರೀಡೆಗಳಲ್ಲಿ ಸಾಧಿಸುವ ಹಸಿವು ಇದೆ. ಆದರೆ ಒಲಿಂಪಿಕ್ಸ್‌ನಲ್ಲಿ ವಯಸ್ಸಿನ ಮಿತಿಯು ಕಾರಣ ನನಗೆ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂದು ನಾನು ಹೇಳಿದ್ದೆ. ಆದರೆ ನಿವೃತ್ತಿ ಘೋಷಣೆ ಮಾಡಿಲ್ಲ. ನಾನು ಇನ್ನೂ ನನ್ನ ಫಿಟ್ನೆಸ್ ಬಗ್ಗೆ ಗಮನಹರಿಸುತ್ತಿದ್ದೇನೆ. ನಿವೃತ್ತಿ ಘೋಷಿಸಿದಾಗ ನಾನು ಎಲ್ಲರಿಗೂ ತಿಳಿಸುತ್ತೇನೆ. ದಯವಿಟ್ಟು ಇದನ್ನು ಸರಿಪಡಿಸಿ ಎಂದೂ ಅವರು ಮನವಿ ಮಾಡಿದ್ದಾರೆ.
ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳ ಪ್ರಕಾರ ಪುರುಷ ಮತ್ತು ಮಹಿಳಾ ಬಾಕ್ಸರ್ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗುತ್ತದೆ. ಹಾಗಾಗಿ ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ವರದಿಯಾಗಿತ್ತು.
ಬಾಕ್ಸಿಂಗ್ ಇತಿಹಾಸದಲ್ಲಿ ಆರು ವಿಶ್ವ ಪ್ರಶಸ್ತಿಗಳನ್ನು ಗೆದ್ದ ಮೊದಲ ಮಹಿಳಾ ಬಾಕ್ಸರ್ ಮೇರಿ ಕೋಮ್. ಐದು ಬಾರಿ ಏಷ್ಯನ್ ಚಾಂಪಿಯನ್ ಆಗಿರುವ ಅವರು 2014ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದ 'ಭಾರತದ ಮೊದಲ ಮಹಿಳಾ ಬಾಕ್ಸರ್' ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಅನುಭವಿ ಆಟಗಾರ್ತಿ ಲಂಡನ್ 2012ರ ಒಲಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕವನ್ನೂ ಗೆದಿದ್ದಾರೆ. 18ನೇ ವಯಸ್ಸಿನಲ್ಲಿ ಪೆನ್ಸಿಲ್ವೇನಿಯಾದ ಸ್ಕ್ರಂಟನ್‌ನಲ್ಲಿ ನಡೆದ ವಿಶ್ವ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ತನ್ನನ್ನು ತಾನು ಜಗತ್ತಿಗೆ ಪರಿಚಯಿಸಿಕೊಂಡಿದ್ದರು.
ಎಐಬಿಎ (AIBA) ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನಿಸಿದ್ದಾರೆ. 2005, 2006, 2008 ಮತ್ತು 2010ರ ಸೀಸನ್ಗಳಲ್ಲಿ ವಿಶ್ವ ಚಾಂಪಿಯನ್ ಶಿಪ್ ಪ್ರಶಸ್ತಿ ಗೆದ್ದಿದ್ದಾರೆ. 2008ರಲ್ಲಿ ಪ್ರಶಸ್ತಿ ಗೆದ್ದ ನಂತರ ಮೇರಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಇದರಿಂದ ಕೆಲ ಕಾಲ ಬಾಕ್ಸಿಂಗ್ನಿಂದ ವಿರಾಮ ತೆಗೆದುಕೊಂಡಿದ್ದರು.
2012ರ ಒಲಿಂಪಿಕ್ ಪದಕವನ್ನು ಗೆದ್ದ ನಂತರ, ಮೇರಿ ತನ್ನ ಮೂರನೇ ಮಗುವಿಗೆ ಜನ್ಮ ನೀಡಿದರು. ಬಳಿಕ ಮತ್ತೊಮ್ಮೆ ವಿಶ್ರಾಂತಿ ಪಡೆದುಕೊಂಡಿದ್ದರು.
ನಂತರ ಬಾಕ್ಸಿಂಗ್ಗೆ ಮರಳಿದ ಮೇರಿ 2018ರ ವಿಶ್ವ ಚಾಂಪಿಯನ್ ಶಿಪ್‌ನಲ್ಲಿ ಸ್ಥಾನ ಪಡೆದು ಉಕ್ರೇನ್ನ ಹನ್ನಾ ಒಖೋಟಾ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ 6ನೇ ಬಾರಿಗೆ ವಿಶ್ವ ಚಾಂಪಿಯನ್ ಆದರು. ಇದಾದ ಒಂದು ವರ್ಷದ ಬಳಿಕ ತಮ್ಮ 8ನೇ ವಿಶ್ವ ಪದಕಕ್ಕೆ ಮುತ್ತಿಕ್ಕಿದರು.
ಕ್ರೀಡಾ ಪ್ರೇಮದಿಂದ ಅನೇಕರಿಗೆ ಮಾದರಿಯಾಗಿರುವ ಮೇರಿ ಕೋಮ್ ಅವರ ಸಾಧನೆಯನ್ನು ಸಾರುವ ಸಿನಿಮಾ ಕೂಡ ಜನಪ್ರಿಯವಾಗಿದೆ. ಮೇರಿ ಪಾತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.