ADVERTISEMENT

ಬ್ಯಾಸ್ಕೆಟ್‌ಬಾಲ್‌: ಬ್ಯಾಂಕ್‌ ಆಫ್‌ ಬರೋಡಕ್ಕೆ ಗೆಲುವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 16:09 IST
Last Updated 4 ನವೆಂಬರ್ 2022, 16:09 IST
ಯಂಗ್‌ ಓರಿಯನ್ಸ್‌ ತಂಡದ ಕರಣ್‌ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌
ಯಂಗ್‌ ಓರಿಯನ್ಸ್‌ ತಂಡದ ಕರಣ್‌ ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌   

ಬೆಂಗಳೂರು: ಬ್ಯಾಂಕ್‌ ಆಫ್‌ ಬರೋಡ ತಂಡದವರು ರಾಜ್ಯ ಅಸೋಸಿಯೇಷನ್‌ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ ಲೀಗ್‌ನಲ್ಲಿ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದರು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪುರುಷರ ವಿಭಾಗದ ಮೊದಲ ಪಂದ್ಯದಲ್ಲಿ ಬ್ಯಾಂಕ್‌ ಆಫ್‌ ಬರೋಡ ತಂಡ 70–71 ರಲ್ಲಿ ಯಂಗ್‌ ಓರಿಯನ್ಸ್‌ ವಿರುದ್ಧ ರೋಚಕವಾಗಿ ಗೆದ್ದಿತು. ಎರಡನೇ ಪಂದ್ಯದಲ್ಲಿ 75–67 ರಲ್ಲಿ ಸಿಎಂಪಿ ತಂಡವನ್ನು ಮಣಿಸಿತು. ಹರೀಶ್‌ ಮತ್ತು ಕಾರ್ತಿಕ್‌ ಎರಡೂ ಪಂದ್ಯಗಳಲ್ಲಿ ಮಿಂಚಿದರು.

ಯಂಗ್‌ ಓರಿಯನ್ಸ್‌ ತನ್ನ ಎರಡನೇ ಪಂದ್ಯದಲ್ಲಿ 79–59 ರಲ್ಲಿ ಮಂಗಳೂರು ಬ್ಯಾಸ್ಕೆಟ್‌ಬಾಲ್‌ ಕ್ಲಬ್‌ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡ 38–29 ರಲ್ಲಿ ಮುನ್ನಡೆಯಲ್ಲಿತ್ತು. ತಲಾ 16 ಪಾಯಿಂಟ್ಸ್‌ ಗಳಿಸಿದ ಪ್ರತ್ಯಾಂಶು ಮತ್ತು ಸುಮಂತ್‌ ಅವರು ಓರಿಯನ್ಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅರ್ಜುನ್‌ 13 ಪಾಯಿಂಟ್ಸ್‌ ಗಳಿಸಿದರು.

ADVERTISEMENT

ಮಂಗಳೂರು ತನ್ನ ಮೊದಲ ಪಂದ್ಯದಲ್ಲಿ 72–56 ರಲ್ಲಿ ಸಿಎಂಪಿ ವಿರುದ್ಧ ಗೆದ್ದಿತು. ಅಶ್ವಿಜ್‌ (16) ಮತ್ತು ಪ್ರದ್ಯುಮ್ನಾ (14) ಗಮನ ಸೆಳೆದರು.

ಮೌಂಟ್ಸ್‌ ಕ್ಲಬ್‌ಗೆ ಗೆಲುವು: ಮಹಿಳೆಯರ ವಿಭಾಗದಲ್ಲಿ ಮೌಂಟ್ಸ್‌ ಕ್ಲಬ್‌ ತಂಡದವರು ಎರಡೂ ಪಂದ್ಯಗಳನ್ನು ಗೆದ್ದರು. ಬೆಳಿಗ್ಗೆ ನಡೆದ ಪಂದ್ಯದಲ್ಲಿ 56–54 ರಲ್ಲಿ ಎಸ್‌ಡಬ್ಲ್ಯುಆರ್‌ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ 59–48 ರಲ್ಲಿ ನಿಟ್ಟೆಯ ಕೆ.ಎಸ್‌.ಹೆಗ್ಡೆ ತಂಡವನ್ನು ಸೋಲಿಸಿತು. ಕೃತಿಕಾ, ಲೋಪಮುದ್ರ ಮತ್ತು ನೀಹಾರಿಕಾ ಅವರು ಉತ್ತಮ ಪ್ರದರ್ಶನ ನೀಡಿದರು.

ಡಿವೈಇಎಸ್‌ ಮೈಸೂರು ತಂಡ 57–52 ರಲ್ಲಿ ಕೆ.ಎಸ್‌.ಹೆಗ್ಡೆ ತಂಡವನ್ನು ಮಣಿಸಿತು. ಎಸ್‌ಡಬ್ಲ್ಯುಆರ್‌ 68–36 ರಲ್ಲಿ ಮೈಸೂರು ವಿರುದ್ಧ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.