ಬೆಂಗಳೂರು: ಅಥರ್ವ ನವರಂಗ ಮತ್ತು ಹಿಮಾಂಶಿ ಚೌಧರಿ ಅವರು ಶನಿವಾರ ಡಾ.ಎಂ.ಎಸ್.ರಾಮಯ್ಯ ಸ್ಮಾರಕ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 17 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.
ದೊಡ್ಡಬಳ್ಳಾಪುರದ ಹಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಅಥರ್ವ 3–0 (11-2, 11-4, 11-7)ಯಿಂದ ಸಿದ್ಧಾಂತ್ ಧರಿವಾಲ್ ಅವರನ್ನು ಹಿಮ್ಮೆಟ್ಟಿಸಿ ಚಾಂಪಿಯನ್ ಆದರು. ಸೆಮಿಫೈನಲ್‌ನಲ್ಲಿ ಅಥರ್ವ 3–2ರಿಂದ ವಿಭಾಸ್ ವಿ.ಜಿ. ವಿರುದ್ಧ; ಸಿದ್ಧಾಂತ್ 3–1ರಿಂದ ಬಿ.ಆರ್.ಗೌರವ್ ವಿರುದ್ಧ ಗೆಲುವು ಸಾಧಿಸಿದ್ದರು.
ಅಥರ್ವ ಅವರಿಗೆ ಇದು ಟೂರ್ನಿಯಲ್ಲಿ ಎರಡನೇ ಪ್ರಶಸ್ತಿಯಾಗಿದೆ. ಅವರು ಶುಕ್ರವಾರ 19 ವರ್ಷದೊಳಗಿನವರ ವಿಭಾಗದಲ್ಲೂ ಚಾಂಪಿಯನ್ ಆಗಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಹಿಮಾಂಶಿ 3–1 (9-11, 11-6, 11-8, 11-5)ರಿಂದ ಹಿಯಾ ಸಿಂಗ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಹಿಮಾಂಶಿ 3–1ರಿಂದ ಕೈರಾ ಬಾಳಿಗಾ ವಿರುದ್ಧ; ಹಿಯಾ 3–1ರಿಂದ ನೀತಿ ಅಗರವಾಲ್ ವಿರುದ್ಧ ಜಯ ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.