ಧಾರವಾಡ: ಸಹನಾ ಎಚ್. ಮೂರ್ತಿ ಅವರು ಇಲ್ಲಿನ ಕಾಸ್ಮಾಸ್ ಸೆಂಚುರಿ ಕ್ಲಬ್‌ನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.
ಸೋಮವಾರ ನಡೆದ ಫೈನಲ್‌ನಲ್ಲಿ ಸಹನಾ 3–1 (11-6, 13-11, 11-9, 11-6) ರಿಂದ ಹಿಮಾಂಶಿ ಚೌಧರಿ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಸಹನಾ 3–1ರಿಂದ ತೃಪ್ತಿ ಪುರೋಹಿತ್ ಅವರನ್ನು; ಹಿಮಾಂಶಿ 3–0ಯಿಂದ ನೀತಿ ಅಗರವಾಲ್ ಅವರನ್ನು ಸೋಲಿಸಿದ್ದರು.
ಅಥರ್ವಗೆ ಡಬಲ್ ಪ್ರಶಸ್ತಿ: ಅಥರ್ವ ನವರಂಗ ಅವರು 17 ವರ್ಷದೊಳಗಿನ ಬಾಲಕರ ಸಿಂಗಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅವರು ಫೈನಲ್‌ನಲ್ಲಿ 3–0 (11-8, 11-8 ,11-9) ಯಿಂದ ಗೌರವ್ ಗೌಡ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅಥರ್ವ 3–1ರಿಂದ ಆರ್ಯ ಎ. ಜೈನ್ ಎದುರು; ಗೌರವ್ 3–0ಯಿಂದ ರಿಗ್ನೇಶ್ ವಿರುದ್ಧ ಗೆಲುವು ಸಾಧಿಸಿದ್ದರು.
15 ವರ್ಷದೊಳಗಿನವರ ವಿಭಾಗದಲ್ಲೂ ಅಥರ್ವ ಚಾಂಪಿಯನ್ ಆದರು. ಅವರು ಫೈನಲ್‌ನಲ್ಲಿ 3–1 (11-9, 13-11, 8-11, 11-8)ರಿಂದ ಸಿದ್ಧಾಂತ್ ಧರಿವಾಲ್ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಅಥರ್ವ 3–1ರಿಂದ ಅರ್ನವ್ ಎನ್. ಎದುರು; ಸಿದ್ಧಾಂತ್ 3–1ರಿಂದ ಗೌರವ್ ಗೌಡ ಎದುರು ಜಯ ಗಳಿಸಿದ್ದರು.
ತನಿಷ್ಕಾಗೂ ಡಬಲ್: ಭಾನುವಾರ 17 ವರ್ಷದೊಳಗಿನ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದಿದ್ದ ತನಿಷ್ಕಾ ಕಪಿಲ್ ಕಾಲಭೈರವ್ ಅವರು 15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲೂ ಚಾಂಪಿಯನ್ ಆದರು. ಅವರು ಫೈನಲ್‌ನಲ್ಲಿ 3–0 (12-10, 11-3, 11-8)ರಿಂದ ಕೈರಾ ಬಾಳಿಗ ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ತನಿಷ್ಕಾ 3–0ಯಿಂದ ಸುಮೇಧಾ ಕೆ.ಎಸ್. ಭಟ್ ವಿರುದ್ಧ; ಕೈರಾ 3–0ಯಿಂದ ಶಿವಾನಿ ಮಹೇಂದ್ರನ್ ವಿರುದ್ಧ ಜಯ ಗಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.