ಬೆಂಗಳೂರು: ನಮ್ಮ ತಂಡವು ವಿಶ್ವದ ಶ್ರೇಷ್ಠ ತಂಡಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿದೆ. ಆದರೆಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಧನೆ ಹೊರಹೊಮ್ಮಲು ನಿರ್ಣಾಯಕ ಸಂದರ್ಭಗಳಲ್ಲಿ ತಾಳ್ಮೆ ಮತ್ತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಭಾರತ ಹಾಕಿ ತಂಡದ ಆಟಗಾರ್ತಿ ನವನೀತ್ ಕೌರ್ ಅಭಿಪ್ರಾಯಪಟ್ಟಿದ್ದಾರೆ.
ಜುಲೈ 23ರಿಂದ ನಡೆಯಲಿರುವ ಟೋಕಿಯೊ ಕೂಟಕ್ಕೂ ಮೊದಲು ನಮ್ಮ ನ್ಯೂನ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ತಂಡದ ಪರ 79 ಪಂದ್ಯಗಳನ್ನು ಆಡಿರುವ ಕೌರ್ ಹೇಳಿದ್ದಾರೆ.
‘ಒಂದು ತಪ್ಪು ಪಾಸ್ ಕೂಡ ಬಹಳ ನೋವು ತರಿಸಬಲ್ಲದು. ಹೀಗಾಗಿ ಒಲಿಂಪಿಕ್ಸ್ ವೇಳೆ ಸ್ಪಷ್ಟ ಯೋಚನೆಗಳೊಂದಿಗೆ ಮುನ್ನಡೆಯಬೇಕು. ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಬೇಕು‘ ಎಂದು ಕೌರ್ ಹೇಳಿದ್ದನ್ನು ಹಾಕಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಪಂದ್ಯದ ಸಂದರ್ಭದಲ್ಲಿ ಆಟಗಾರ್ತಿಯರಲ್ಲಿ ಗೊಂದಲ ಇರಬಾರದು. ಯಾರ ಪಾತ್ರ ಏನು, ಯೋಜನೆಗಳನ್ನು ಕಾರ್ಯಗತಗೊಳಿಸುವ ಬಗೆ ಹೇಗೆ ಎಂಬುದನ್ನು ಕೋಚ್ ಹಾಗೂ ನಾಯಕಿ ಖಾತರಿಪಡಿಸಬೇಕು. ಇದರಿಂದ ಪಂದ್ಯದ ವೇಳೆ ಸಮನ್ವಯ ಸಾಧಿಸಲು ಅನುಕೂಲವಾಗುತ್ತದೆ‘ ಎಂದು ಅವರು ನುಡಿದರು.
‘ಒಲಿಂಪಿಕ್ಸ್ ನಮಗೆ ಬಹಳ ದೊಡ್ಡ ಸವಾಲು. ಸಾಧ್ಯವಾದಷ್ಟು ಶ್ರೇಷ್ಠ ಆಟವಾಡಿ ಉತ್ತಮ ಫಲಿತಾಂಶ ಹೊರಹೊಮ್ಮುವಂತೆ ಮಾಡಬೇಕು‘ ಎಂದರು.
ಭಾರತ ತಂಡದ ತರಬೇತಿ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ದಕ್ಷಿಣ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.