ADVERTISEMENT

ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಆಲ್‌ರೌಂಡ್‌ ಆಟ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 16:28 IST
Last Updated 28 ಅಕ್ಟೋಬರ್ 2024, 16:28 IST
ದಬಾಂಗ್‌ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ರೇಡರ್‌ ಶಾಡ್ಲೂಯಿ ಯಶಸ್ವಿಯಾಗಿ ಗೆರೆ ಮುಟ್ಟಿದರು.
ದಬಾಂಗ್‌ ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡದ ರೇಡರ್‌ ಶಾಡ್ಲೂಯಿ ಯಶಸ್ವಿಯಾಗಿ ಗೆರೆ ಮುಟ್ಟಿದರು.   

ಹೈದರಾಬಾದ್‌: ಐದಕ್ಕೂ ಹೆಚ್ಚು ಬಾರಿ ದೊರೆತ ಸೂಪರ್‌ ಟ್ಯಾಕಲ್‌ ಅವಕಾಶಗಳನ್ನು ಸಮರ್ಥವಾಗಿ
ಬಳಸಿಕೊಂಡ ಹರಿಯಾಣ ಸ್ಟೀಲರ್ಸ್‌, ಆಲ್‌ರೌಂಡ್‌ ಪ್ರದರ್ಶನದ ಬಲದಿಂದ ಪ್ರೊ ಕಬಡ್ಡಿ ಲೀಗ್‌  ಪಂದ್ಯದಲ್ಲಿ ಸೋಮವಾರ ದಬಾಂಗ್‌ ಡೆಲ್ಲಿ ತಂಡವನ್ನು 41–34 ರಿಂದ ಮಣಿಸಿತು.

ಇದರೊಂದಿಗೆ ಹಾಲಿ ಟೂರ್ನಿಯಲ್ಲಿ ಸತತ ಎರಡನೇ ಜಯ ದಾಖಲಿಸಿದ ಹರಿಯಾಣ ಸ್ಟೀಲರ್ಸ್‌ ಹತ್ತು ಅಂಕಗಳನ್ನು ಕಲೆಹಾಕಿತು. ರೇಡರ್‌ ಅಶು ಮಲಿಕ್‌ ಏಕಾಂಗಿ ಹೋರಾಟದ ಹೊರತಾಗಿಯೂ ದಬಾಂಗ್‌ ಡೆಲ್ಲಿ ಎರಡನೇ ಸೋಲಿಗೆ ಗುರಿಯಾಯಿತು.

ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್‌ ಒಮ್ಮೆಯೂ ಮುನ್ನಡೆ ಬಿಟ್ಟುಕೊಡಲಿಲ್ಲ. ಸ್ಟೀಲರ್ಸ್‌ ಪರ ಶಿವಂ ಪತರೆ (8 ಅಂಕ), ಮೊಹಮ್ಮದ್‌ರೇಝಾ ಶಾಡ್ಲುಯಿ (10), ಜೈದೀಪ್‌ (5) ಅಂಕ ಗಳಿಸಿ ಮಿಂಚಿದರು.

ADVERTISEMENT

ದಬಾಂಗ್‌ ಡೆಲ್ಲಿ ಪರ ಅಶು ಮಲಿಕ್‌ (13) ಏಕಾಂಗಿಯಾಗಿ ಹೋರಾಟ ನಡೆಸಿದರು. ಪಂದ್ಯ ಮುಕ್ತಾಯಕ್ಕೆ ಐದು ನಿಮಿಷಗಳು ಬಾಕಿ ಇರುವಾಗ  37-29 ರಲ್ಲಿ ಎಂಟು ಅಂಕಗಳ ಮುನ್ನಡೆ ಕಾಯ್ದುಕೊಂಡ ಹರಿಯಾಣ ನಂತರ ಎಚ್ಚರಿಕೆ ಆಟಕ್ಕೆ ಒತ್ತು ನೀಡಿತು.

ಆಲ್‌ರೌಂಡರ್‌ ಮೊಹಮ್ಮದ್‌ರೇಝಾ ಎದುರಾಳಿ ರೇಡರ್‌ಗಳನ್ನು ಪದೇ ಪದೇ ತಮ್ಮ ಆ್ಯಂಕಲ್‌ ಹೋಲ್ಡ್‌ನಲ್ಲಿ ಬಂಧಿಯಾಗಿಸಿ ಗಮನ ಸೆಳೆದರು.

ಮಂಗಳವಾರದ ಪಂದ್ಯ: ಬೆಂಗಾಲ್‌ ವಾರಿಯರ್ಸ್‌– ಪುಣೇರಿ ಪಲ್ಟನ್‌ (ರಾತ್ರಿ 8.00); ಬೆಂಗಳೂರು ಬುಲ್ಸ್‌ ಮತ್ತು ದಬಾಂಗ್‌ ಡೆಲ್ಲಿ (9.00)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.