ಬೆಂಗಳೂರು: ಒಲಿಂಪಿಕ್ಸ್‌ಗೆ ತಂಡ ಸೂಕ್ತ ರೀತಿಯಲ್ಲಿ ಸಜ್ಜಾಗುತ್ತಿದ್ದು ಮೊದಲ ಪಂದ್ಯದ ಜಯವೇ ಮುಖ್ಯವಾಗಿರುವುದರಿಂದ ಅದರ ಕಡೆಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂದು ಭಾರತ ಹಾಕಿ ತಂಡದ ಅನುಭವಿ ಫಾರ್ವರ್ಡ್ ಆಟಗಾರ ರಮಣ್‌ದೀಪ್ ಸಿಂಗ್ ಬುಧವಾರ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಒಲಿಂಪಿಕ್ಸ್ ಅಭಿಯಾನ ಜುಲೈ 24ರಂದು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಆ ಪಂದ್ಯದಲ್ಲಿ ಜಯ ಗಳಿಸಿದರೆ ಉಳಿದ ಪಂದ್ಯಗಳ ಬಗ್ಗೆ ಭರವಸೆ ಮೂಡಲಿದೆ ಎಂದು ರಮಣ್‌ದೀಪ್ ಹೇಳಿದ್ದಾರೆ. ಅವರ ಅಭಿಪ್ರಾಯವನ್ನು ಹಾಕಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿದೆ. ಈ ಗುಂಪಿನಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ, ಆತಿಥೇಯ ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಸ್ಪೇನ್ ತಂಡಗಳು ಇವೆ. ಭಾರತ ತಂಡದ ತರಬೇತಿ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ದಕ್ಷಿಣ ಪ್ರಾದೇಶಿಕ ಕೇಂದ್ರದಲ್ಲಿ ನಡೆಯುತ್ತಿದೆ.
ಇಲ್ಲಿ ಒಲಿಂಪಿಕ್ಸ್‌ನ ವಾತಾವರಣವನ್ನೇ ನಿರ್ಮಿಸಿ ಭಾರತದ ಆಟಗಾರರು ಎರಡು ತಂಡಗಳನ್ನಾಗಿ ಮಾಡಿಕೊಂಡು ಆಡುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಬಲಿಷ್ಠ ತಂಡಗಳ ವಿರುದ್ಧ ಕಣಕ್ಕೆ ಇಳಿಯುವಾಗ ಯಾವ ರೀತಿಯ ಸಿದ್ಧತೆ ಮಾಡಲಾಗುತ್ತದೆಯೋ ಹಾಗೆಯೇ ಇಲ್ಲೂ ಮಾಡಲಾಗುತ್ತಿದೆ ಎಂದು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಆಡಿದ್ದ ರಮಣ್‌ದೀಪ್ ಹೇಳಿದ್ದಾರೆ.
‘ಒಲಿಂಪಿಕ್ಸ್‌ಗೆ ಆಯ್ಕೆ ಟ್ರಯಲ್ಸ್ ನಡೆಯುತ್ತಿದೆ. ಹೀಗಾಗಿ ತಂಡದಲ್ಲಿರುವ ಪ್ರತಿಯೊಬ್ಬರೂ ಸಂಭ್ರಮದಲ್ಲಿದ್ದಾರೆ. ತರಬೇತಿಯಲ್ಲಿ ಅನುಸರಿಸುತ್ತಿರುವ ಮಾದರಿಯು ಸತತ ಎರಡು ದಿನಗಳ ಪಂದ್ಯಗಳಿಗೆ ಆಟಗಾರರು ಸಜ್ಜಾಗಲು ನೆರವಾಗುತ್ತಿದೆ. ಸತತ ಪಂದ್ಯಗಳು ಇದ್ದಾಗ ಮೊದಲನೇ ಪಂದ್ಯದ ನಂತರ ಮತ್ತೊಂದು ಪಂದ್ಯಕ್ಕೆ ಹೇಗೆ ಸಜ್ಜುಗೊಳ್ಳಬೇಕು ಎಂಬುದನ್ನು ಅಭ್ಯಾಸ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ ಅವರು ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. 2016 ಮತ್ತು 2017 ನನ್ನ ಪಾಲಿಗೆ ಮಹತ್ವದ್ದು. ಆದರೆ 2018ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಮೊಣಕಾಲಿಗೆ ಗಾಯಗೊಂಡು ಹಿನ್ನಡೆ ಅನುಭವಿಸಿದೆ. ಅದರಿಂದ ಹೊರಬರಲು ಆರೇಳು ತಿಂಗಳುಗಳೇ ಹಿಡಿದವು. 2019ರ ಮಧ್ಯಭಾಗದಿಂದ ಉತ್ತಮವಾಗಿ ಆಡಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.