ಬರ್ಮಿಂಗ್‌ಹ್ಯಾಮ್: ಬಾಲ್ಯದಲ್ಲಿ ಪೋಲಿಯೊ ಪೀಡಿತರಾಗಿ ಕಾಲಿನಲ್ಲಿ ಬಲ ಕಳೆದುಕೊಂಡಿದ್ದ ಸುಧೀರ್ ಛಲ ಕಳೆದುಕೊಳ್ಳಲಿಲ್ಲ. ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ಯಾರಾ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಹಿರಿಮೆ ಅವರದಾಯಿತು.
ಹೆವಿವೇಟ್ ಪವರ್‌ಲಿಫ್ಟಿಂಗ್‌ನಲ್ಲಿ ಶುಕ್ರವಾರ ಚಿನ್ನದ ಪದಕ ಮುಡಿಗೇರಿಸಿಕೊಂಡ ಅವರು, ಕೂಟ ದಾಖಲೆಯನ್ನೂ ಬರೆದರು. ಏಷ್ಯನ್ ಪ್ಯಾರಾ ಗೇಮ್ಸ್ ಕಂಚು ವಿಜೇತ ಸುಧೀರ್, ಇಲ್ಲಿ ಮೊದಲ ಪ್ರಯತ್ನದಲ್ಲಿ 208 ಕೆಜಿ ತೂಕ ಎತ್ತಿದರು. ಎರಡನೇ ಯತ್ನದಲ್ಲಿ ಅದನ್ನು 212ಕ್ಕೇ ಏರಿಸಿದರು. ಒಟ್ಟು 134.5 ಪಾಯಿಂಟ್ಸ್ ಕಲೆಹಾಕಿ ಅಗ್ರಸ್ಥಾನ ಗಳಿಸಿದರು.
ಸುಧೀರ್ ಗಳಿಸಿದ ಪಾಯಿಂಟ್ಸ್ ಕೂಟ ದಾಖಲೆಯಾಗಿದೆ. ನೈಜೀರಿಯಾದ ಇಕೆಚುಕ್ವು ಕ್ರಿಸ್ಟಿಯನ್ ಒಬಿಚುಕ್ವು (133.6) ಬೆಳ್ಳಿ ಮತ್ತು ಸ್ಕಾಟ್ಲೆಂಡ್‌ನ ಮಿಕಿ ಯೂಲೆ (130.9) ಕಂಚಿನ ಪದಕಕ್ಕೆ ಕೊರಳೊಡ್ಡಿದರು.
27 ವರ್ಷದ ಸುಧೀರ್, ದಕ್ಷಿಣ ಕೊರಿಯಾದಲ್ಲಿ ಜೂನ್‌ನಲ್ಲಿ ನಡೆದ ಏಷ್ಯಾ ಒಷಿನಿಯಾ ಓಪನ್ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಕಂಚು ಗೆದ್ದಿದ್ದರು. ಆಗ ಅವರು 214 ಕೆಜಿ ಸಾಧನೆ ಮಾಡಿದ್ದರು. ಹರಿಯಾಣದ ಸೋನಿಪತ್‌ನ ಸುಧೀರ್, 2013ರಲ್ಲಿ ಮೊದಲ ಬಾರಿ ಪವರ್‌ಲಿಫ್ಟಿಂಗ್ ಕ್ರೀಡೆಯ ಕಣಕ್ಕಿಳಿದರು. ಮುಂದಿನ ವರ್ಷ ನಡೆಯಲಿರುವ ಏಷ್ಯನ್ ಪ್ಯಾರಾ ಗೇಮ್ಸ್‌ಗೂ ಅವರೂ ಅರ್ಹತೆ ಗಳಿಸಿದ್ದಾರೆ.
ರಾಷ್ಟ್ರಪತಿ, ಪ್ರಧಾನಿ ಅಭಿನಂದನೆ: ಸುಧೀರ್ ಅವರ ಸಾಧನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.