ಪುಣೆ: ರೋಚಕವಾಗಿ ನಡೆದ ಬೆಂಗಾಲ್ ವಾರಿಯರ್ಸ್ ಮತ್ತು ಯುಪಿ ಯೋಧಾಸ್ ತಂಡಗಳ ನಡುವಿನ ಪ್ರೊ ಕಬಡ್ಡಿ ಲೀಗ್‌ನ ಪಂದ್ಯ ಸೋಮವಾರ 37–37ರಲ್ಲಿ ಸಮಬಲದೊಂದಿಗೆ ಮುಕ್ತಾಯವಾಯಿತು. ಇದು 10ನೇ ಆವೃತ್ತಿಯಲ್ಲಿ ‘ಟೈ’ ಆದ ಎರಡನೇ ಪಂದ್ಯವಾಗಿದೆ.
ಯೋಧಾಸ್ ತಂಡದ ರೈಡರ್ ಸುರೇಂದರ್ ಗಿಲ್ 13 ಟಚ್ ಪಾಯಿಂಟ್‌ನೊಂದಿಗೆ 18 ಅಂಕಗಳನ್ನು ಸಂಪಾದಿಸಿದರು. ಈ ಆವೃತ್ತಿಯಲ್ಲಿ ಅವರು ಮೂರನೇ ಬಾರಿ ‘ಸೂಪರ್ 10’ ಸಾಧನೆ ಮೆರೆದರು. ಅವರಿಗೆ ವಿಜಯ್ ಮಲಿಕ್ (7) ಸಾಥ್ ನೀಡಿದರೆ, ಈ ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ನಾಯಕ ಪ್ರದೀಪ್ ನರ್ವಾಲ್ ನಿರಾಸೆ ಅನುಭವಿಸಿದರು.
ವಾರಿಯರ್ಸ್ ಪರ ನಿತಿನ್ ಕುಮಾರ್ (10) ಈ ಆವೃತ್ತಿಯಲ್ಲಿ ಎರಡನೇ ಬಾರಿ ‘ಸೂಪರ್ ಟೆನ್’ ಸಾಧನೆ ಮಾಡಿದರು. ಮಣಿಂದರ್ ಸಿಂಗ್ (9), ಶ್ರೀಕಾಂತ್ ಜಾಧವ್ (6) ಉಪಯುಕ್ತ ಕಾಣಿಕೆ ನೀಡಿದರು.
ಮಧ್ಯಂತರದ ವೇಳೆ 18–14ರಿಂದ ಮುನ್ನಡೆಯಲ್ಲಿದ್ದ ಯೋಧಾಸ್ ತಂಡವು, ಪಂದ್ಯ ಮುಗಿಯಲು ಐದು ನಿಮಿಷಗಳಿರುವಾಗ 35- 30ರಿಂದ ಹಿಡಿತ ಸಾಧಿಸಿತ್ತು. ಆದರೆ, ನಂತರದಲ್ಲಿ ಎಚ್ಚರಿಕೆಯ ಆಟವಾಡಿದ ವಾರಿಯರ್ಸ್ ಆಟಗಾರರು ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಎರಡೂ ತಂಡಗಳು ಒಂದು ಬಾರಿ ಆಲೌಟ್ ಆದವು.
ವಾರಿಯರ್ಸ್ ತಂಡಕ್ಕೆ ಇದು ಎರಡನೇ ‘ಟೈ’ ಪಂದ್ಯವಾಗಿದೆ. ಈ ಹಿಂದೆ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದೊಂದಿಗೆ 28–28ರಿಂದ ಸಮಬಲ ಸಾಧಿಸಿತ್ತು.
ಆಡಿರುವ 6 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದು, ಎರಡಲ್ಲಿ ಸಮಬಲ ಸಾಧಿಸಿ, ಮತ್ತೊಂದರಲ್ಲಿ ಸೋತಿರುವ ವಾರಿಯರ್ಸ್ ತಂಡವು 21 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಯೋಧಾಸ್ ತಂಡವು ಐದು ಪಂದ್ಯಗಳ ಪೈಕಿ ಎರಡಲ್ಲಿ ಜಯಿಸಿ, ಮತ್ತೆರಡಲ್ಲಿ ಸೋತು, ಕೊನೆಯ ಪಂದ್ಯದಲ್ಲಿ ‘ಟೈ’ ಸಾಧಿಸಿ 15 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎಂಟರಿಂದ ಐದನೇ ಸ್ಥಾನಕ್ಕೆ ಏರಿದೆ.
ಪಲ್ಟನ್‌ಗೆ ಜಯ: ಮತ್ತೊಂದು ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ ತಂಡವು 30–23ರಿಂದ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು. ಪಲ್ಟನ್ ತಂಡಕ್ಕೆ ಇದು ತವರಿನಲ್ಲಿ ಸತತ ಎರಡನೇ ಜಯವಾಗಿದೆ. ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು, ಒಂದರಲ್ಲಿ ಸೋತಿರುವ ಪಲ್ಟನ್ ತಂಡವು ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಇಂದಿನ ಪಂದ್ಯ
ಹರಿಯಾಣ ಸ್ಟೀಲರ್ಸ್– ಗುಜರಾತ್ ಜೈಂಟ್ಸ್ (ರಾತ್ರಿ 8)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.