ಮಂಗಳೂರು: ಸರ್ಫಿಂಗ್, ಸ್ಟ್ಯಾಂಡ್ ಅಪ್ ಪೆಡಲಿಂಗ್ ಮತ್ತಿತರ ವೃತ್ತಿಪರ ಜಲಕ್ರೀಡೆಗಳ ಚಟುವಟಿಕೆಗಳ ಮೂಲಕ ಸದಾ ಉತ್ಸಾಹದ ಅಲೆಗಳನ್ನು ಎಬ್ಬಿಸುತ್ತಿರುವ ಮಂಗಳೂರು ಮತ್ತು ನಗರ ಹೊರವಲಯದ ಕಡಲ ಕಿನಾರೆಗಳು ಈಗ ಇನ್ನಷ್ಟು ಪುಟಿದೇಳತೊಡಗಿವೆ.
ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಇದೇ 31ರಿಂದ ಜೂನ್ 2ರ ವರೆಗೆ ನಡೆಯಲಿರುವ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ಗೆ ತಯಾರಿ ಆರಂಭಗೊಂಡಿದ್ದು ಸ್ಥಳೀಯ ಸರ್ಫಿಂಗ್ ಕ್ಲಬ್‌ಗಳು ಸರ್ಫರ್‌ಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ನಗರದ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ (ಎಸ್ಎಫ್‌ಐ) ಆಯೋಜಿಸಿರುವ ಚಾಂಪಿಯನ್‌ಷಿಪ್‌ನ ಐದನೇ ಆವೃತ್ತಿ ಪುರುಷ, ಮಹಿಳೆ, 16 ವರ್ಷದೊಳಗಿನ ಬಾಲಕರು ಮತ್ತು ಬಾಲಕಿಯರು ಪ್ರಶಸ್ತಿಗಾಗಿ ಅಲೆಗಳ ಸವಾಲನ್ನು ಎದುರಿಸಲಿದ್ದಾರೆ.
ಮಂಗಳೂರು ಸರ್ಫ್ ಕ್ಲಬ್ ಆಯೋಜಿಸುವ ‘ಮಂಗಳೂರು ಸರ್ಫ್’, ಮಂತ್ರ ಸರ್ಫ್ ಕ್ಲಬ್‌ನ ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್ ಮತ್ತು ಅಸೋಸಿಯೇಷನ್ ಆಫ್ ಪೆಡಲ್ ಸರ್ಫ್ ಪ‍್ರೊಫೆಷನಲ್ಸ್ (ಎಪಿಪಿ) ಸಹಯೋಗದಲ್ಲಿ ಸರ್ಫಿಂಗ್ ಸ್ವಾಮಿ ಫೌಂಡೇಷನ್ ಆಯೋಜಿಸುವ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್ ಜಲಕ್ರೀಡೆಗೆ ಸಂಬಂಧಿಸಿ ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಅತಿದೊಡ್ಡ ಸ್ಪರ್ಧೆಗಳು.
ಈ ಬಾರಿ ಮಂಗಳೂರು ಸರ್ಫ್ ಕ್ಲಬ್ ಡೆನ್ ಡೆನ್ ಸ್ವಿಮ್ ಸ್ಪರ್ಧೆ ಆಯೋಜಿಸಿದ್ದರಿಂದ ‘ಮಂಗಳೂರು ಸರ್ಫ್’ ಕೈಬಿಟ್ಟಿತ್ತು. ಹೀಗಾಗಿ ರಾಷ್ಟ್ರೀಯ ಓಪನ್ ಚಾಂಪಿಯನ್‌ಷಿಪ್ ಮಹತ್ವ ಪಡೆದುಕೊಂಡಿದೆ. ಚಾಂಪಿಯನ್‌ಷಿಪ್‌ನ ಪೂರ್ವಭಾವಿ ಚಟುವಟಿಕೆಗಳಿಗೆ ಶನಿವಾರ ಚಾಲನೆ ದೊರಕಿದೆ. ಇದರ ಬೆನ್ನಲ್ಲೇ ಸ್ಪರ್ಧಾಳುಗಳು ಹಾಗೂ ಸರ್ಫಿಂಗ್ ಕ್ಲಬ್‌ಗಳ ಹುಮ್ಮಸ್ಸು ಇಮ್ಮಡಿಯಾಗಿದೆ. ದೇಶದ ಪ್ರಮುಖ ಸರ್ಫರ್‌ಗಳಾದ ರಮೇಶ್ ಬೂದಿಹಾಳ, ಕಿಶೋರ್ ಕುಮಾರ್, ಹರೀಶ್ ಎಂ, ಶ್ರೀಕಾಂತ್ ಡಿ, ಮಣಿಕಂಠನ್ ಡಿ, ಕಮಲಿ ಮೂರ್ತಿ, ಸೃಷ್ಟಿ ಸೆಲ್ವಂ ಮತ್ತು ಸಂಧ್ಯಾ ಅರುಣ್ ಪಾಲ್ಗೊಳ್ಳುವುದು ಖಚಿತವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ತಮಿಳುನಾಡಿನ ಮಹಾಬಲಿಪುರಂನ ಸರ್ಫ್ ಟರ್ಫ್ ಕ್ಲಬ್‌ನ ಕಿಶೋರ್ ಕುಮಾರ್ ಕಳೆದ ಬಾರಿ ಸಸಿಹಿತ್ಲುವಿನಲ್ಲಿ ಪುರುಷರ ಮತ್ತು ಬಾಲಕರ ವಿಭಾಗದ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದರು. ತಮಿಳುನಾಡಿನ ಕಮಲಿ ಮೂರ್ತಿ ಮಹಿಳೆಯರ ಮತ್ತು ಬಾಲಕಿಯರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡು ‘ಡಬಲ್’ ಸಂಭ್ರಮದಲ್ಲಿ ತೇಲಿದ್ದರು. ಈ ಬಾರಿಯೂ ಇವರಿಬ್ಬರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ಬಹುಶಿಸ್ತೀಯ ಪ್ರತಿಭೆ, ಪುತ್ತೂರಿನ ಸಿಂಚನಾ ಗೌಡ ಸರ್ಫಿಂಗ್, ಸ್ಟ್ಯಾಂಡ್ ಅಪ್ ಪೆಡಲಿಂಗ್ ಮತ್ತು ಕಯಾಕಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ತಮಿಳುನಾಡಿನಲ್ಲಿ ನಡೆದ ವಿಶ್ವ ಸರ್ಫ್ ಲೀಗ್‌ನ 1 ಕಿಲೊಮೀಟರ್ ಸ್ಟ್ಯಾಂಡ್ ಅಪ್ ಪೆಡಲಿಂಗ್‌ನ ಪ್ರಶಸ್ತಿ ಗೆದ್ದಿದ್ದ ಅವರು ಮಹಿಳೆಯರ ವೈಯಕ್ತಿಕ ಕಯಾಕಿಂಗ್‌ನಲ್ಲಿ 3ನೇ ಸ್ಥಾನ ಗಳಿಸಿದ್ದರು. ಸರ್ಫಿಂಗ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಹೀಗಾಗಿ ಅವರ ಮೇಲೆಯೂ ಈ ಬಾರಿ ಭರವಸೆ ಇದೆ.
‘ಸಿಂಚನಾ ಆರಂಭದಿಂದಲೂ ಉತ್ತಮ ಸಾಮರ್ಥ್ಯ ತೋರುತ್ತಿದ್ದು ಕರ್ನಾಟಕದ ಭರವಸೆಯಾಗಿ ಮೂಡಿಬಂದಿದ್ದಾರೆ. ತಣ್ಣೀರು ಬಾವಿ ಒಂದನೇ ಬೀಚ್‌ನಲ್ಲಿ ಸರ್ಕಾರ 3 ಎಕರೆ ಜಾಗ ಕೊಟ್ಟಿದ್ದು ಅಲ್ಲಿ ಕ್ಲಬ್ ಹೌಸ್ ನಿರ್ಮಾಣ ಆದ ನಂತರ ಮಂಗಳೂರು ಸರ್ಫ್ ಕ್ಲಬ್‌ನ ಚಟುವಟಿಕೆಗಳಿಗೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ. ಸಿಂಚನಾ ಅವರಂಥ ಕ್ರೀಡಾಪಟುವಿಗೆ ಇದರಿಂದ ಅನುಕೂಲ ಆಗಿದೆ’ ಎಂದು ಕ್ಲಬ್ ಸ್ಥಾಪಕ ಚಿರಾಗ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.