ADVERTISEMENT

ಸುಶೀಲ್‌ ಸುತ್ತ ವಿವಾದಗಳ ಹುತ್ತ...

susheel

ಜಿ.ಶಿವಕುಮಾರ
Published 25 ಆಗಸ್ಟ್ 2019, 19:45 IST
Last Updated 25 ಆಗಸ್ಟ್ 2019, 19:45 IST
ಸುಶೀಲ್‌ ಕುಮಾರ್‌ (ಬಲ) ಮತ್ತು ಜಿತೇಂದರ್‌ ಸಿಂಗ್‌ ನಡುವಣ ಹಣಾಹಣಿ –ಪಿಟಿಐ ಚಿತ್ರ
ಸುಶೀಲ್‌ ಕುಮಾರ್‌ (ಬಲ) ಮತ್ತು ಜಿತೇಂದರ್‌ ಸಿಂಗ್‌ ನಡುವಣ ಹಣಾಹಣಿ –ಪಿಟಿಐ ಚಿತ್ರ   

ಭಾರತ ಕಂಡ ಅಪ್ರತಿಮ ಕುಸ್ತಿಪಟುಗಳಲ್ಲಿ ಸುಶೀಲ್‌ ಕುಮಾರ್‌ ಕೂಡ ಒಬ್ಬರು.ನವದೆಹಲಿಯ ನಜಾಫ್‌ಗಡದ ಈ ಪೈಲ್ವಾನ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ದೇಶದ ಹಿರಿಮೆ ಹೆಚ್ಚಿಸಿದ್ದಾರೆ. 2008ರಲ್ಲಿ ಬೀಜಿಂಗ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಅವರು 2012ರಲ್ಲಿ ಲಂಡನ್‌ನಲ್ಲಿ ನಡೆದಿದ್ದ ಕೂಟದಲ್ಲಿ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದ್ದರು.ಈ ಸಾಧನೆ ಮಾಡಿದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದರು.

ವಿಶ್ವ ಚಾಂಪಿಯನ್‌ಷಿಪ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲೂ ಚಿನ್ನದ ಪದಕಗಳನ್ನು ಬೇಟೆಯಾಡಿರುವ ಈ ಪೈಲ್ವಾನನಿಗೆ, ಪದ್ಮಶ್ರೀ ಪುರಸ್ಕಾರವೂ ಒಲಿದಿತ್ತು. ವಯಸ್ಸು 36 ಆದರೂ ಸುಶೀಲ್‌ ಅವರಲ್ಲಿನ ಕುಸ್ತಿ ಕಸುವು ಕಡಿಮೆಯಾಗಿಲ್ಲ. ಬರೋಬ್ಬರಿ ಎಂಟು ವರ್ಷಗಳ ನಂತರ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿರುವುದು ಇದಕ್ಕೆ ನಿದರ್ಶನ. ಇದಕ್ಕಾಗಿ ಅವರು ಅಡ್ಡ ದಾರಿ ಹಿಡಿದರೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಕಾರಣ ಹೋದ ವಾರ ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದ ಕೆ.ಡಿ.ಜಾಧವ್‌ ಅರೇನಾದಲ್ಲಿ ನಡೆದಿದ್ದ ಆಯ್ಕೆ ಟ್ರಯಲ್ಸ್‌.

ಪುರುಷರ 74 ಕೆ.ಜಿ.ವಿಭಾಗದ ಈ ಟ್ರಯಲ್ಸ್‌, ವಿವಾದದ ಸ್ವರೂಪ ಪಡೆದುಕೊಂಡಿತ್ತು. ಜಿತೇಂದರ್‌ ಕುಮಾರ್‌ ಎದುರಿನ ಫೈನಲ್‌ ಹೋರಾಟವನ್ನು ಗೆಲ್ಲಲೇಬೇಕೆಂಬ ಹಠದಲ್ಲಿ ಸುಶೀಲ್‌ ‘ಕ್ರೀಡಾ ಸ್ಫೂರ್ತಿ’ಯನ್ನೇ ಮರೆತರು ಎಂಬ ಆರೋಪಗಳೂ ಕೇಳಿಬಂದಿದ್ದವು.

ADVERTISEMENT

ಅಷ್ಟಕ್ಕೂ ಹೋದ ಮಂಗಳವಾರ ಜಾಧವ್‌ ಅರೇನಾದಲ್ಲಿ ನಡೆದಿದ್ದಾರೂ ಏನು?, ಅಂದು ಸುಶೀಲ್‌ ನಿಜವಾಗಿಯೂ ಒರಟಾಗಿ ವರ್ತಿಸಿದ್ದರೇ ಎಂಬ ಪ್ರಶ್ನೆಗಳಿಗೆ ಅಂದೇ ಉತ್ತರ ದೊರಕಿದ್ದವು. ಈ ಹೋರಾಟಕ್ಕೆ ಸಾಕ್ಷಿಯಾದವರ ಪೈಕಿ ಬಹುತೇಕರು ಸುಶೀಲ್‌ ಅವರದ್ದೇ ತಪ್ಪು ಎಂದು ಒತ್ತಿ ಹೇಳಿದ್ದರು.

ಫೈನಲ್‌ನಲ್ಲಿ ಸುಶೀಲ್‌ 4–2 ಪಾಯಿಂಟ್ಸ್‌ನಿಂದ ಜಿತೇಂದರ್ ಅವರನ್ನು ‘ಚಿತ್‌’ ಮಾಡಿದ್ದರು. ಅದಕ್ಕೂ ಮುನ್ನ ಹಲವು ಪ್ರಹಸನಗಳು ನಡೆದಿದ್ದವು. ಮೊದಲ ಮೂರು ನಿಮಿಷಗಳಲ್ಲಿ ಪರಾಕ್ರಮ ಮೆರೆದಿದ್ದ ಸುಶೀಲ್‌ 4–0 ಮುನ್ನಡೆ ಗಳಿಸಿದ್ದರು. ದ್ವಿತೀಯಾರ್ಧದಲ್ಲಿ ಅವರು ಒರಟು ಆಟಕ್ಕೆ ಅಣಿಯಾಗಿಬಿಟ್ಟಿದ್ದರು. ಹೆಬ್ಬೆರಳಿನಿಂದ ಜಿತೇಂದರ್‌ ಅವರ ಎಡಗಣ್ಣಿಗೆ ತಿವಿದಿದ್ದರು. ಜಿತೇಂದರ್‌ ಕಣ್ಣಿನಿಂದ ರಕ್ತ ಸುರಿಯಲಾರಂಭಿಸಿತ್ತು. ನೋವು ತಾಳಲಾರದೆ ಅವರು ಮ್ಯಾಟ್‌ನಲ್ಲೇ ಬಿದ್ದು ಒದ್ದಾಡಿದ್ದರು.

ಅದನ್ನು ನೋಡಿ ಜಿತೇಂದರ್‌ ಅವರ ಕೋಚ್‌ ಜೈವೀರ್‌ ದಿಗ್ಭ್ರಾಂತರಾಗಿದ್ದರು. ‘ನಿನಗೆ ಕೈಮುಗಿದು ಕೇಳಿಕೊಳ್ಳುತ್ತೇನೆ, ಆ ಹುಡುಗನ ಜೊತೆ ಹಾಗೆಲ್ಲಾ ವರ್ತಿಸಬೇಡ. ನೀನು ಮೊದಲಿನಿಂದಲೂ ಇದನ್ನೇ ಮಾಡಿಕೊಂಡು ಬಂದಿದ್ದೀಯಾ. ಈಗ ಜಿತೇಂದರ್‌ ಬದುಕನ್ನು ಹಾಳು ಮಾಡಬೇಡ’ ಎಂದು ಪರಿ ಪರಿಯಾಗಿ ಬೇಡಿಕೊಂಡಿದ್ದರು.

ಪಂದ್ಯದ ನಂತರ ಜಿತೇಂದರ್ ಕೂಡ ಸುಶೀಲ್‌ ಮೇಲೆ ಆರೋಪಗಳ ಮಳೆ ಸುರಿಸಿದ್ದರು. ‘ಸುಶೀಲ್‌, ಉದ್ದೇಶಪೂರ್ವಕವಾಗಿಯೇ ನನ್ನ ಕಣ್ಣಿಗೆ ತಿವಿದು ಗಾಯ ಮಾಡಿದರು. ಅವರ ಒರಟು ಆಟದಿಂದಾಗಿ ಭುಜಕ್ಕೂ ಪೆಟ್ಟಾಯಿತು’ ಎಂದು ದೂರಿದ್ದರು.

ಸುಶೀಲ್‌ ವಿರುದ್ಧ ಇಂತಹ ಆರೋಪ ಕೇಳಿಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಕುಸ್ತಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ 74 ಕೆ.ಜಿ.ವಿಭಾಗದ ಕುಸ್ತಿಪಟುವನ್ನು ಆಯ್ಕೆಮಾಡುವ ಸಲುವಾಗಿ 2017ರ ಡಿಸೆಂಬರ್‌ನಲ್ಲಿ ಕೆ.ಡಿ.ಜಾಧವ್‌ ಅರೇನಾದಲ್ಲೇ ಟ್ರಯಲ್ಸ್‌ ನಡೆದಿತ್ತು. ಪ್ರವೀಣ್‌ ರಾಣಾ ವಿರುದ್ಧದ ಸೆಮಿಫೈನಲ್‌ ಹಣಾಹಣಿ ಸುಶೀಲ್‌ ಕ್ರೀಡಾಬದುಕಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಸುಶೀಲ್‌ ಪಂದ್ಯ ಗೆದ್ದಿದ್ದೇ ತಡ, ಕ್ರೀಡಾಂಗಣ ಅಕ್ಷರಶಃ ರಣಾಂಗಣವಾಗಿತ್ತು. ಪ್ರವೀಣ್‌ ಮತ್ತು ಅವರ ಹಿರಿಯ ಸಹೋದರ ನವೀನ್‌ ಮೇಲೆ ಸುಶೀಲ್‌ ಬೆಂಬಲಿಗರು ಏಕಾಏಕಿ ದಾಳಿ ನಡೆಸಿ ಮನಸೋ ಇಚ್ಛೆ ಥಳಿಸಿದ್ದರು. ಘಟನೆಯ ನಂತರ ಸುಶೀಲ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ತನಗೇ ಅವಕಾಶ ನೀಡಬೇಕೆಂದು ಸುಶೀಲ್‌ ‘ಕ್ಯಾತೆ’ ತೆಗೆದಿದ್ದರು. 2015ರಲ್ಲಿ ಲಾಸ್‌ ವೇಗಸ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ (74 ಕೆ.ಜಿ) ಚಿನ್ನ ಗೆದ್ದಿದ್ದ ನರಸಿಂಗ್‌ ಯಾದವ್‌, ರಿಯೊಗೆ ರಹದಾರಿ ಪಡೆದಿದ್ದರು. 2014ರ ಕಾಮನ್‌ವೆಲ್ತ್‌ ಕೂಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದ ಸುಶೀಲ್‌, ನಂತರ ಕುಸ್ತಿ ಸ್ಪರ್ಧೆಗಳಿಂದ ದೂರವೇ ಉಳಿದಿದ್ದರು. ನರಸಿಂಗ್‌ ಅರ್ಹತೆ ಗಳಿಸಿದ್ದು ಗೊತ್ತಾದ ಕೂಡಲೇ ಅವರು ಟ್ರಯಲ್ಸ್‌ ನಡೆಸಬೇಕೆಂದು ಪಟ್ಟು ಹಿಡಿದಿದ್ದರು. ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಇದಕ್ಕೆ ಸೊಪ್ಪು ಹಾಕದಿದ್ದಾಗ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ದೆಹಲಿ ನ್ಯಾಯಾಲಯ ಸುಶೀಲ್‌ ಅವರ ಮನವಿಯನ್ನು ತಿರಸ್ಕರಿಸಿತು. ಇದರ ಬೆನ್ನಲ್ಲೇ ನರಸಿಂಗ್‌ ಅವರು ಉದ್ದೀಪನಾ ಮದ್ದು ಸೇವಿಸಿ ಸಿಕ್ಕಿಬಿದ್ದಿದ್ದರು. ಹೀಗಾಗಿ ಸುಶೀಲ್‌ಗೆ ರಿಯೊ ‘ಟಿಕೆಟ್‌’ಲಭಿಸಿತ್ತು.

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ದುರುದ್ದೇಶದಿಂದ ಸುಶೀಲ್‌, ಒಳಸಂಚು ನಡೆಸಿ ತನ್ನನ್ನು ಡೋಪಿಂಗ್‌ ಪ್ರಕರಣದಲ್ಲಿ ಸಿಲುಕಿಸಿದ್ದಾಗಿ ನರಸಿಂಗ್‌ ಆರೋಪಿಸಿದ್ದರು. ಇದಕ್ಕೆ ಹಲವರು ಧ್ವನಿಗೂಡಿಸಿದ್ದರು.

2017ರಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಮಾತು. ಅದರಲ್ಲಿ ಸುಶೀಲ್‌ ಚಿನ್ನದ ಪದಕ ಗೆದ್ದಿದ್ದರು. ಮೂರು ಸುತ್ತುಗಳಲ್ಲಿ ‘ವಾಕ್‌ ಓವರ್‌’ ಪಡೆದಿದ್ದ ಅವರು ಕ್ವಾರ್ಟರ್‌ ಫೈನಲ್‌ಗೆ ಕಾಲಿಟ್ಟಿದ್ದರು. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿತ್ತು. ಸುಶೀಲ್‌ ಅವರು ತಮ್ಮ ಪ್ರಭಾವ ಬಳಸಿ ಎದುರಾಳಿಗಳು ಸ್ಪರ್ಧಾ ಕಣದಿಂದೆ ಹಿಂದೆ ಸರಿಯುವಂತೆ ಮಾಡಿದ್ದಾಗಿ ಹಲವರು ದೂರಿದ್ದರು. 2014ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಲು ಕುಸ್ತಿ ಫೆಡರೇಷನ್‌ ಅವಕಾಶ ನೀಡಿರಲಿಲ್ಲ. ಇದರಿಂದ ಒಳ ಒಳಗೇ ಕುದಿಯುತ್ತಿದ್ದ ಸುಶೀಲ್‌, ಅದೇ ವರ್ಷ ನಿಗದಿಯಾಗಿದ್ದ ಏಷ್ಯನ್‌ ಕ್ರೀಡಾಕೂಟದಿಂದ ಕೊನೇ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಅವರ ಆ ನಡೆಯ ಬಗ್ಗೆಯೂ ಟೀಕೆಗಳು ವ್ಯಕ್ತವಾಗಿದ್ದವು.

ಅರ್ಜುನ ಮತ್ತು ರಾಜೀವ್‌ ಗಾಂಧಿ ಖೇಲ್‌ ರತ್ನದಂತಹ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವಗಳಿಗೆ ಭಾಜನರಾಗಿರುವ ಸುಶೀಲ್‌, ಯುವ ಸಮುದಾಯಕ್ಕೆ ಮಾದರಿಯಾಗಬೇಕು. ವಿವಾದಗಳಿಂದಲೇ ಸುದ್ದಿಯಾಗುವ ಬದಲು ಸರಿ ದಾರಿಯಲ್ಲಿ ಸಾಗಿ ಇನ್ನಷ್ಟು ಪದಕಗಳನ್ನು ಗೆಲ್ಲಬೇಕು. ಈ ಮೂಲಕ ದೇಶದ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂಬುದು ಕ್ರೀಡಾ ಪ್ರೇಮಿಗಳ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.