ADVERTISEMENT

ರಾಷ್ಟ್ರೀಯ ಸೀನಿಯರ್ ಈಜು ಕೂಟ: ಸುವನಾ ಭಾಸ್ಕರ್‌ ರಾಷ್ಟ್ರೀಯ ದಾಖಲೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2023, 23:30 IST
Last Updated 4 ಜುಲೈ 2023, 23:30 IST
ಸುವನಾ ಸಿ.ಭಾಸ್ಕರ್‌
ಸುವನಾ ಸಿ.ಭಾಸ್ಕರ್‌   

ಬೆಂಗಳೂರು: ಕರ್ನಾಟಕದ ಸುವನಾ ಸಿ. ಭಾಸ್ಕರ್, ಹೈದರಾಬಾದ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಮಂಗಳವಾರ ಮಹಿಳೆಯರ 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಡನೆ ಚಿನ್ನ ಗೆದ್ದುಕೊಂಡರು.

ಗಚ್ಚಿಬೌಲಿ ಕ್ರೀಡಾಂಗಣದ ಈಜುಕೊಳದಲ್ಲಿ ನಡೆಯುತ್ತಿರುವ ಈ ಚಾಂಪಿಯನ್‌ಷಿಪ್‌ನಲ್ಲಿ ಸುವನಾ 29.63 ಸೆಕೆಂಡುಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು. ಈ ಹಿಂದಿನ ದಾಖಲೆ (2022ರಲ್ಲಿ 29.79 ಸೆ., ಗುವಾಹಟಿ) ಸ್ಥಾಪಿಸಿದ್ದ ಮಾನಾ ಪಟೇಲ್ ಎರಡನೇ ಸ್ಥಾನ ಪಡೆದರು. ಗುಜರಾತ್‌ನ ಮಾನಾ ಕೂಡ ತಮ್ಮ ಹಿಂದಿನ ದಾಖಲೆಯನ್ನು ಉತ್ತಮಪಡಿಸಿ 29.71 ಸೆ.ಗಳಲ್ಲಿ ಸ್ಪರ್ಧೆ ಪೂರೈಸಿದರು. ಕರ್ನಾಟಕದ ರಿಧಿಮಾ ವೀರೇಂದ್ರ ಕುಮಾರ್ (30.53 ಸೆ.) ಕಂಚಿನ ಪದಕ ಪಡೆದರು.

ಈ ಚಿನ್ನದ ಜೊತೆ ಮಂಗಳವಾರ ಕರ್ನಾಟಕದ ಈಜುಪಟುಗಳು ಒಂದು ಬೆಳ್ಳಿ, ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡರು.

ADVERTISEMENT

ಮಹಿಳೆಯರ 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಋತುಜಾ ಖಾಡೆ 26.47 ಸೆ.ಗಳಲ್ಲಿ ಗುರಿತಲುಪಿ 20 ವರ್ಷ ಹಳೆಯ ದಾಖಲೆ ಮುರಿದು ಚಿನ್ನದ ಪದಕ ಜಯಿಸಿದರು. ಕರ್ನಾಟಕದ ಶಿಖಾ ಟಂಡನ್‌ 2003ರಲ್ಲಿ (ಕೋಲ್ಕತ್ತ) ಈ ದೂರವನ್ನು 26.61 ಸೆ.ಗಳಲ್ಲಿ ಈಜಿದ್ದರು. ಮಹಾರಾಷ್ಟ್ರದವರೇ ಆದ ರಾಜ್ಯದ ಅನನ್ಯಾ ನಾಯಕ್‌ (26.64 ಸೆ.) ಎರಡನೇ ಸ್ಥಾನ ಪಡೆದರೆ, ಕರ್ನಾಟಕದ ನೀನಾ ವೆಂಕಟೇಶ್ (26.73 ಸೆ.) ಚಿನ ಪದಕ ಪಡೆದರು.

200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಕರ್ನಾಟಕದ ಸುಹಾಸಿನಿ ಘೋಷ್‌ 2ನಿ.26.94 ಸೆ.ಗಳಲ್ಲಿ ಗುರಿಮುಟ್ಟಿ ಕಂಚಿನ ಪದಕ ಪಡೆದರು. ಈ ಸ್ಪರ್ಧೆಯಲ್ಲಿ ರೈಲ್ವೆ ತಂಡದ ಆಸ್ತಾ ಚೌಧರಿ (2ನಿ.22.63 ಸೆ.) ಮೊದಲಿಗರಾದರು.

ಮಹಿಳೆಯರ 4x400 ಮೀ. ಮೆಡ್ಲೆ ರಿಲೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡ (ರಿಧಿಮಾ, ಮಾನವಿ ವರ್ಮಾ, ನೀನಾ, ಶಾಲಿನಿ ಆರ್‌.ದೀಕ್ಷಿತ್‌) ಎರಡನೇ ಸ್ಥಾನ ಪಡೆಯಿತು. ಮಹಾರಾಷ್ಟ್ರ ತಂಡ 4ನಿ.23.65 ಸೆ.ಗಳಲ್ಲಿ ದೂರ ಕ್ರಮಿಸಿದರೆ, ಕರ್ನಾಟಕ ತಂಡ 4ನಿ.27.80 ಸೆ.ಗಳನ್ನು ತೆಗೆದುಕೊಂಡಿತು.

ವೀರಧವಳ್ ಪ್ರಥಮ: ಪುರುಷರ 50 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅನುಭವಿ ವೀರಧವಳ ಖಾಡೆ (ಕಾಲ: 22.82 ಸೆ.) ಚಿನ್ನ ಗೆದ್ದರು. ಮಹಾರಾಷ್ಟ್ರದ ಮಿಹಿರ್‌ ಅಂಬ್ರೆ (22.96 ಸೆ) ಅವರು ಬೆಳ್ಳಿ ಮತ್ತು ಸರ್ವಿಸಸ್‌ನ ಎ.ಎಸ್‌.ಆನಂದ್ (23.30 ಸೆ.) ಕಂಚಿನ ಪದಕ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.