ADVERTISEMENT

ಅಮೆರಿಕ ಓಪನ್‌ ಟೆನಿಸ್‌: ಪ್ರಶಸ್ತಿಗೆ ಸ್ವಟೆಕ್‌– ಜಬೇರ್‌ ಸೆಣಸು

ಸೆಮಿಯಲ್ಲಿ ಎಡವಿದ ಗಾರ್ಸಿಯಾ, ಸಬಲೆಂಕಾ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 14:22 IST
Last Updated 9 ಸೆಪ್ಟೆಂಬರ್ 2022, 14:22 IST
ಆನ್ಸ್‌ ಜಬೇರ್‌ ಅವರ ಸಂಭ್ರಮ –ಎಎಫ್‌ಪಿ ಚಿತ್ರ
ಆನ್ಸ್‌ ಜಬೇರ್‌ ಅವರ ಸಂಭ್ರಮ –ಎಎಫ್‌ಪಿ ಚಿತ್ರ   

ನ್ಯೂಯಾರ್ಕ್‌: ಪೋಲಂಡ್‌ನ ಇಗಾ ಸ್ವಟೆಕ್‌ ಮತ್ತು ಟ್ಯುನಿಷಿಯಾದ ಆನ್ಸ್‌ ಜಬೇರ್‌ ಅವರು ಅಮೆರಿಕ ಓಪನ್‌ ಗ್ರ್ಯಾನ್‌ಸ್ಲಾಮ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಗೆ ಪೈಪೋಟಿ ನಡೆಸಲಿದ್ದಾರೆ.

ವಿಶ್ವದ ಅಗ್ರ ರ‍್ಯಾಂಕ್‌ನ ಆಟಗಾರ್ತಿ ಸ್ವಟೆಕ್‌ ಅವರು ಗುರುವಾರ ನಡೆದ ಸೆಮಿಫೈನಲ್‌ನಲ್ಲಿ 3-6, 6-1, 6-4 ರಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಎದುರು ಗೆದ್ದರು. ಜಬೇರ್‌ 6-1, 6-3 ರಲ್ಲಿ ಫ್ರಾನ್ಸ್‌ನ ಕರೊಲಿನ್‌ ಗಾರ್ಸಿಯಾ ಅವರನ್ನು ಮಣಿಸಿದರು.

ಸ್ವಟೆಕ್‌ ಮತ್ತು ಜಬೇರ್‌ ಅವರು ಅಮೆರಿಕ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು. ಆದ್ದರಿಂದ ಶನಿವಾರ ಯಾರೇ ಗೆದ್ದರೂ ಈ ಬಾರಿ ಹೊಸಬರಿಗೆ ಚಾಂಪಿಯನ್‌ಪಟ್ಟ ಲಭಿಸಲಿದೆ.

ADVERTISEMENT

ಅಮೆರಿಕ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ ಆಫ್ರಿಕಾದ ಮೊದಲ ಮಹಿಳೆ ಎಂಬ ಗೌರವ ಜಬೇರ್‌ಗೆ ಒಲಿಯಿತು. ಎರಡು ತಿಂಗಳ ಹಿಂದೆ ವಿಂಬಲ್ಡನ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದ ಅವರು ಟ್ರೋಫಿ ಗೆಲ್ಲಲು ವಿಫಲರಾಗಿದ್ದರು. ಆ ನಿರಾಶೆಯನ್ನು ಮರೆಸುವ ಅವಕಾಶ ದೊರೆತಿದೆ.

ಸೆಮಿಫೈನಲ್‌ನಲ್ಲಿ ಸೊಗಸಾದ ಆಟವಾಡಿದ ಅವರು ಕೇವಲ 66 ನಿಮಿಷಗಳಲ್ಲಿ ಗೆಲುವು ಒಲಿಸಿಕೊಂಡರು. ಮೊದಲ ಸೆಟ್‌ ಗೆಲ್ಲಲು 23 ನಿಮಿಷಗಳನ್ನು ತೆಗೆದುಕೊಂಡರು. ಪಂದ್ಯದಲ್ಲಿ ನಾಲ್ಕು ಗೇಮ್‌ಗಳನ್ನು ಮಾತ್ರ ಎದುರಾಳಿಗೆ ಬಿಟ್ಟುಕೊಟ್ಟರು.

ಗಾರ್ಸಿಯಾ ಅವರ 13 ಪಂದ್ಯಗಳ ಗೆಲುವಿನ ಓಟ ಈ ಸೋಲಿನೊಂದಿಗೆ ಕೊನೆಗೊಂಡಿತು. ಇಲ್ಲಿಗೆ ಬರುವ ಮುನ್ನ ಅವರು ಸಿನ್ಸಿನಾಟಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.

‘ವಿಂಬಲ್ಡನ್‌ ಫೈನಲ್‌ನಲ್ಲಿ ಸೋಲು ಎದುರಾದ ಬಳಿಕ ನನ್ನ ಮೇಲಿನ ಒತ್ತಡ ಹೆಚ್ಚಿತ್ತು. ಇಲ್ಲಿ ಫೈನಲ್‌ ಪ್ರವೇಶಿಸಿರುವುದರಿಂದ ಅಲ್ಪ ನಿರಾಳ ಆಗಿದ್ದೇನೆ’ ಎಂದು ಜಬೇರ್‌ ಪ್ರತಿಕ್ರಿಯಿಸಿದ್ದಾರೆ.

ಸ್ವಟೆಕ್‌ ಅವರು ಫೈನಲ್‌ ಪ್ರವೇಶಿಸಲು ಅಲ್ಪ ಪರಿಶ್ರಮಪಡಬೇಕಾಯಿತು. ಸಬಲೆಂಕಾ ಮೊದಲ ಸೆಟ್‌ಅನ್ನು 6–3 ರಲ್ಲಿ ಜಯಿಸಿ ಉತ್ತಮ ಆರಂಭ ಪಡೆದರು. ಎರಡನೇ ಸೆಟ್‌ನಲ್ಲಿ ಶಿಸ್ತಿನ ಆಟವಾಡಿದ ಪೋಲಂಡ್‌ನ ಆಟಗಾರ್ತಿ ಸಮಬಲ ಸಾಧಿಸಿದರು.

ನಿರ್ಣಾಯಕ ಮೂರನೇ ಸೆಟ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯಿತು. ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದ ಸಬಲೆಂಕಾ 4–2 ರಲ್ಲಿ ಮುನ್ನಡೆ ಪಡೆದರು. ಒತ್ತಡಕ್ಕೆ ಒಳಗಾದರೂ ಧೃತಿಗೆಡದೆ ಮರುಹೋರಾಟ ನಡೆಸಿದ ಸ್ವಟೆಕ್‌ ಮುಂದಿನ ನಾಲ್ಕೂ ಗೇಮ್‌ಗಳನ್ನು ಗೆದ್ದುಕೊಂಡು ಫೈನಲ್‌ಗೆ ಲಗ್ಗೆಯಿಟ್ಟರು. ಕೊನೆಯ 20 ಪಾಯಿಂಟ್‌ಗಳಲ್ಲಿ 16ನ್ನು ಕೂಡಾ ಸ್ವಟೆಕ್‌ ತಮ್ಮದಾಗಿಸಿಕೊಂಡರು.

ಪುರುಷರ ಸೆಮಿ ಹೋರಾಟ: ಪುರುಷರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್ ಪಂದ್ಯಗಳಲ್ಲಿ ಸ್ಪೇನ್‌ನ ಕಾರ್ಲೊಸ್‌ ಅಲ್ಕರಾಜ್‌– ಅಮೆರಿಕದ ಫ್ರಾನ್ಸೆಸ್‌ ಟೈಫೊ ಹಾಗೂ ನಾರ್ವೆಯ ಕಾಸ್ಪರ್‌ ರೂಡ್‌– ರಷ್ಯಾದ ಕರೆನ್‌ ಕಚನೊವ್‌ ಅವರು ಪೈಪೋಟಿ ನಡೆಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.